ಕರ್ನಾಟಕದ ಕೋಟೆಗಳು


ಬೆಂಗಳೂರು ಕೋಟೆ

bengaluruFort1ಯಲಹಂಕದಿಂದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಕೆಂಪೇಗೌಡರು ೧೫೩೭ ರಲ್ಲಿ ಇಲ್ಲಿ ಕೋಟೆಯನ್ನು ಕಟ್ಟಿಸಿದರು. ಇಲ್ಲಿಂದ ೧೬೩೮ ರವರೆಗೆ ಕೆಂಪೇಗೌಡರ ಆಳ್ವಿಕೆಯಲ್ಲಿ ಈ ನಗರವಿತ್ತು. ಇಂದಿಗೆ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯ ಬಳಿ ವಿಕ್ಟೋರಿಯಾ ಆಸ್ಪತ್ರೆಯ ಮುಂದೆ ಕಾಣುವ ಕೋಟೆಯ ಭಾಗವೇ ಆಗ ದೆಹಲಿ ದ್ವಾರವಾಗಿತ್ತು. ಬೆಂಗಳೂರು ಕೋಟೆಯ ವಿಸ್ತೀರ್ಣವು ಈಗಿನ ಮೈಸೂರು ಬ್ಯಾಂಕ್ ಮುಂದೆ ಇರುವ ಕೆಂಪೇಗೌಡ ರಸ್ತೆಯಲ್ಲಿ ಹಾಗೇ ಮುಂದುವರೆದು ನೇರವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮುಂದುವರೆದು ಗೂಡ್ಸ್ ಶೆಡ್ ರಸ್ತೆಯ ಕಡೆಗೆ ಚಲಿಸಿ ಅಲ್ಲಿಂದ ನೇರವಾಗಿ ಚಾಮರಾಜಪೇಟೆಯ ಕಡೆಗೆ ಹೋಗಿ ಕೆಂಪೇಗೌಡ ವೈದ್ಯಕೀಯ ಸಂಸ್ಥೆ (KIMS) ಮುಂದಿನ ಶಿವಶಂಕರ ವೃತ್ತದವರೆಗೂ ಹೋಗಿ ಹಾಗೇ ಪುರಭವನದ ಬಳಿ ಬಂದು ಅಲ್ಲಿಂದ ಹಡ್ಸನ್ ಚರ್ಚ್ ಎದುರು ಇರುವ ಅಲಸೂರ್ ಗೇಟ್ ಪೊಲೀಸ್ ಠಾಣೆಯ ಮುಂದೆ ಹಾದು ಮತ್ತೆ ಕೆಂಪೇಗೌಡರ ರಸ್ತೆಯಲ್ಲಿ ಮುಂದುವರೆದು ಮತ್ತೆ ಮೈಸೂರು ಬ್ಯಾಂಕ್ ಬಳಿ ಬಂದು ಸೇರಿಕೊಳ್ಳುವಷ್ಟು ವಿಸ್ತಾರವಾಗಿತ್ತು.
ಇದರಲ್ಲಿ ಕೋಟೆಯ ಭಾಗವು ಕೆಂಪೇಗೌಡರ ಕಾಲದಲ್ಲಿಯೂ ಹಾಗೂ ಆನಂತರ ಟಿಪ್ಪುವಿನವರೆಗೂ ಮುಖ್ಯವಾಗಿ ಆಡಳಿತ ಘಟಕವಾಗಿತ್ತು. ಈ ಕೋಟೆಯ ಆವರಣದ ಪ್ರಮುಖ ಸ್ಮಾರಕಗಳೆಂದರೆ ಟಿಪ್ಪುಸುಲ್ತಾನನ ಅರಮನೆ, ಕೋಟೆ ವೆಂಕಟರಮಣ ದೇವಾಲಯ, ಕೋಟೆ ಆಂಜನೇಯ ದೇವಾಲಯ, ಜಲಕಂಠೇಶ್ವರ ದೇವಾಲಯ, ಮದ್ದಿನ ಮನೆಗಳು.  ಉಳಿದ ಭಾಗವು ಪೇಟೆಯ ಪ್ರದೇಶವಾಗಿದ್ದು ಇಲ್ಲಿ ವಿವಿಧ ಜನಾಂಗಗಳ, ವಿವಿಧ ವ್ಯಾಪಾರೀ ಕೇಂದ್ರಗಳ ಹೆಸರಿನಲ್ಲಿ ಪೇಟೆಗಳನ್ನು ರಚಿಸಲಾಗಿದೆ. ಇದರಲ್ಲಿ ಅನೇಕ ಪೇಟೆಗಳು ಇಂದಿಗೂ ಅದೇ ಹೆಸರನ್ನು ಉಳಿಸಿಕೊಂಡಿವೆ. ಬೆಂಗಳೂರು ಕೋಟೆಯ ಉತ್ತರ ದ್ವಾರವನ್ನು ದೆಹಲಿ ದ್ವಾರವೆಂದು ದಕ್ಷಿಣ ದ್ವಾರವನ್ನು ಮೈಸೂರು ದ್ವಾರವೆಂದೂ, ಪೂರ್ವದ ದ್ವಾರವನ್ನು ಆನೆಕಲ್ಲು ದ್ವಾರವೆಂದೂ ಕರೆಯುತ್ತಿದ್ದರು. ಪಶ್ಚಿಮ ದ್ವಾರವು ಟಿಪ್ಪುಸುಲ್ತಾನನ ಕಾಲದಲ್ಲಿಯೇ ಮುಚ್ಚಿಸಲಾಯಿತು.
ಬೆಂಗಳೂರು ಪೇಟೆಗಿದ್ದ ಎತ್ತರವಾದ ಗೋಡೆಯು ೧೯ನೆಯ ಶತಮಾನದ ಮಧ್ಯದಲ್ಲಿ ತೆಗೆದ ಚಿತ್ರಗಳಲ್ಲೂ ಸದೃಢವಾಗಿಯೇ ಕಾಣುತ್ತದೆ. ವಿಸ್ತಾರವಾದ ಕಲ್ಲಿನ ಗೋಡೆಗೆ ಚಿಕ್ಕ ಚಿಕ್ಕ ಕತ್ತರಿಸಿದ ಕಲ್ಲನ್ನು ಉಪಯೋಗಿಸಲಾಗಿದೆ. ಕೋಟೆಯ ಮೇಲೆ ಇಟ್ಟಿಗೆ-ಗಾರೆಗಳ ಕೈಪಿಡಿ ಗೋಡೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ಬುರುಜುಗಳಲ್ಲಿ ತೋಪುಗಳನ್ನು ಚಲಾಯಿಸಲು ಅನುಕೂಲವಾಗುವಂತೆ ಭಾಗಗಳನ್ನು ನಿರ್ಮಿಸಲಾಗಿದೆ. ಈ ಪೇಟೆಯನ್ನು ಪ್ರವೇಶಿಸಲು ಮೂರು ಮುಖ್ಯವಾದ ದ್ವಾರಗಳಿದ್ದವು. ಈಗಿನ ಮೈಸೂರು ಬ್ಯಾಂಕಿನ ಬಳಿಯಿದ್ದ ದ್ವಾರವನ್ನು ಯಲಹಂಕ ದ್ವಾರವೆಂದೂ, ಅಲಸೂರು ಗೇಟ್ ಪೊಲೀಸ್ ಠಾಣೆಯ ಬಳಿಯಿದ್ದ ದ್ವಾರವನ್ನು ಅಲಸೂರು ದ್ವಾರವೆಂತಲೂ, ಬಿನ್ನಿಮಿಲ್ ಬಳಿಯಿದ್ದ ದ್ವಾರವನ್ನು ಕೆಂಗೇರಿ ದ್ವಾರವೆಂದು ಕರೆಯುತ್ತಿದ್ದರು. ಈ ಪೇಟೆಯಲ್ಲಿ ಪ್ರಮುಖವಾದ ರಂಗನಾಥ ದೇವಾಲಯ, ಅರುಣಾಚಲೇಶ್ವರ ದೇವಾಲಯ, ಅರಳೇಕಟ್ಟೆ ಈಶ್ವರ ದೇವಾಲಯ, ತೋಟದ ವೀರಭದ್ರ ದೇವಾಲಯ, ಮಂಜಿ ಸೋಮೇಶ್ವರ ದೇವಾಲಯ, ಬೆಳ್ಳಿ ಬಸವಣ್ಣ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಧರ್ಮರಾಯಸ್ವಾಮಿ ದೇವಾಲಯಗಳು ಪ್ರಮುಖ ದೇವಾಲಯಗಳಾಗಿದ್ದು ಜುಮ್ಮಾ ಮಸೀದಿ, ಜೋಲಿ ಮಸೀದಿ, ತವಕ್ಕಲ್ ಮಸ್ತಾನ್ ಸಾಬರ ದರ್ಗಾ, ತಾರಾಮಂಡಲ ಪೇಟೆಯ ಜುಮ್ಮಾ ಮಸೀದಿಗಳು ಹಳೆಯವು. ಬೆಂಗಳೂರು ಕೋಟೆಯ ಉತ್ತರ ದಿಕ್ಕಿಗೆ ಧರ್ಮಾಂಬುದಿ ಕೆರೆ, ಪಶ್ಚಿಮಕ್ಕೆ ಅಗ್ರಹಾರ ಕೆರೆ, ದಕ್ಷಿಣಕ್ಕೆ ಮಾವಳ್ಳಿ ಕೆರೆಗಳು ಕೋಟೆಯ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿದ್ದವು.

ಬಿಜಾಪುರದ ಕೋಟೆ

bijapurFort1ಭಾರತದ ಅತ್ಯಂತ ಬೃಹತ್ ಕೋಟೆಗಳಲ್ಲಿ ಒಂದಾದ ಬಿಜಾಪುರದ ಕೋಟೆ ಹೆಚ್ಚು ಕಡಿಮೆ ದುಂಡಾಗಿದೆ. ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆಯೇ ಸುಮಾರು ೧೦ ಕಿ.ಮೀ ಆಗುಲವಿದೆ. ಈ ಗೋಡೆಯ ಒಳಭಾಗದಲ್ಲಿನ ಉದ್ದವೇ ಸುಮಾರು ೪ ಕಿ.ಮೀಗಳು. ಕೋಟೆಯ ಗೋಡೆಯ ಬೃಹತ್ ಕಲ್ಲುಗಳನ್ನು ಚಪ್ಪಟೆಯಾಗಿ ಕತ್ತರಿಸಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಕೋಟೆ ಗೋಡೆಯ ಎತ್ತರ ೨೦ ಅಡಿ ಸರಾಸರಿ. ಅಂದು ಬಿಜಾಪುರವೆಂದರೆ ಈ ಕೋಟೆಯ ಒಳಗಡೆ ಇದ್ದ ಊರೇ ಆಗಿತ್ತು. ಈ ಕೋಟೆಯ ದಪ್ಪ ಕೆಲವೆಡೆ ೫೦ ಅಡಿಗಳಷ್ಟಿವೆ  ಎಂದರೆ ಎಂತಹ ಬಲಿಷ್ಠವಾದ ಕೋಟೆಯೆಂದು ಊಹೆ ಮಾಡಿಕೊಳ್ಳಬಹುದು. ಈ ಕೋಟೆಯ ಸುತ್ತಲೂ ಇರುವ ಕೊತ್ತಳಗಳ ಸಂಖ್ಯೆಯೇ 96. ಕೋಟೆಯ ಸುತ್ತಲೂ ಸುಮಾರು 40 ರಿಂದ 50 ಅಡಿಯ ಆಳವಾದ ಕಂದಕವಿದೆ.

ಈ ಕೋಟೆಯನ್ನು ಪ್ರವೇಶಿಸಲು ಮುಖ್ಯವಾಗಿ 5 ಬಾಗಿಲುಗಳಿವೆ. ಆ ಬಾಗಿಲುಗಳನ್ನು ಐದು ಹೆಸರುಗಳಿಂದಲೇ ಕರೆಯಲಾಗುತ್ತದೆ. ಪಶ್ಚಿಮದ ಬಾಗಿಲು ಮೆಕ್ಕಾದರ್ವಾಜ, ವಾಯುವ್ಯದ ಬಾಗಿಲು ಶಾಹಪುರ ದರ್ವಾಜ, ದಕ್ಷಿಣದಲ್ಲಿ ಮನಗೋಳಿ ದಾರ್ವಾಜಗಳಿವೆ. ಪ್ರತಿಯೊಂದು ದ್ವಾರದ ಮುಂದೆಯೂ ವೃತ್ತಾಕಾರದ ಎರಡು ಬುರುಜುಗಳು ಅಕ್ಕಪಕ್ಕದಲ್ಲಿದ್ದವು. ಇವುಗಳಲ್ಲಿ ದಕ್ಷಿಣದ ಮನಗೋಳಿ ದರ್ವಾಜ ಅತ್ಯಂತ ಬಲಿಷ್ಠವಾದುದು. ಇದಕ್ಕೆ ಅತ್ಯಂತ ಬಲಿಷ್ಠವಾದ ಬಾಗಿಲುಗಳಿರುತ್ತಿತ್ತು. ಒಂದು ಅಡಿಯಷ್ಟು ಚೂಪಾದ ಮೊಳೆಗಳು ಈ ಬಾಗಿಲಿನಿಂದ ಹೊರ ಬಂದಿರುತ್ತಿತ್ತು. ಈ ಬಾಗಿಲನ್ನು ಅತಿಕ್ರಮಿಸಿದವರು ಇತಿಹಾಸದಲ್ಲಿ ಯಾರೂ ಇಲ್ಲ. ಸ್ವಯಂ ಔರಂಗಜೇಬ ಕೂಡ ಈ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಗದೆ ಈ ಕೋಟೆ ಗೋಡೆಯನ್ನು ಒಡೆದು ಮೇಲೆ ಬೇರೆ ದ್ವಾರಗಳಿಂದ ಒಳಕ್ಕೆ ನುಗ್ಗಿ ಕೊನೆಯಲ್ಲಿ ಒಳಗಿನಿಂದ ಈ ಬಾಗಿಲನ್ನು ತೆರೆಸಿದ ನಂತರವೇ ಅವನು ಒಳಗೆ ಹೋಗಿದ್ದು. ಈ ಬಾಗಿಲಿಗೆ ಫತೆ ದರ್ವಾಜ ಎಂದು ಹೆಸರಿಟ್ಟನಂತೆ.
ಈ ಬಿಜಾಪುರದ ಕೋಟೆಯ ಒಳಗೆ ಇನ್ನೊಂದು ಸುತ್ತಿನ ಕೋಟೆಯಿದೆ. ಈ ಕೋಟೆಯಲ್ಲಿ ಅರಮನೆ ಪ್ರದೇಶವಿದೆ. ಇದನ್ನು ಅರಕಿಲ್ಲ ಎನ್ನುತ್ತಾರೆ. ಇಂದು ವೈಭವವೆಲ್ಲಾ ಮುಗಿದುಹೋದ ಮೇಲೆಯೇ ಇಷ್ಟು ರಮಣೀಯವಾಗಿ ಕಾಣಬೇಕಾದರೆ ಇನ್ನು ಉಚ್ಛ್ರಾಯ ಕಾಲದಲ್ಲಿ ಈ ಭಾಗ ಹೇಗಿರಬಹುದೆಂದು ಕುತೂಹಲವುಂಟಾಗುತ್ತದೆ. ಆನಂದ ಮಹಲ್ ಮುಖ್ಯವಾದ ಅರಮನೆಯಾಗಿತ್ತು. ಗಗನ್ ಮಹಲ್ ರಾಜರ ನಿವಾಸ ಸ್ಥಾನವಾಗಿತ್ತು. ಬಿಜಾಪುರದ ಕೋಟೆಯಲ್ಲಿ ವಿಶ್ವಪ್ರಸಿದ್ಧ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಜಾಮಿಮಸೀದಿ, ಅಸರ್ ಮಹಲ್ ಮುಂತಾದ ಆದಿಲ್ ಶಾಹಿ ಸ್ಮಾರಕಗಳಿವೆ. ಬಿಜಾಪುರದ ಕೋಟೆಯಲ್ಲಿ ನೀರನ್ನು ಕೊಳವೆಗಳ ಮೂಲಕ ಹಾಯಿಸಲಾಗುತಿತ್ತು. ಈ ನೀರನ್ನು ಬೇಗಮ್ ತಲಾಬ್ ಮತ್ತು ತೊರವಿಕೆರೆಗಳಿಂದ ಕೊಳವೆಗಳ ಮೂಲಕ ಹಾಯಿಸಲಾಗುತ್ತಿತ್ತು.

ಇದಲ್ಲದೆ ಅನೇಕ ನೀರಿನ ಆಸರೆಗಳು ಈ ಕೋಟೆಯಲ್ಲಿ ಇದ್ದವು. ತಾಜ್ ಚೌಡಿ ಅತ್ಯಂತ ದೊಡ್ಡ ಬಾವಿ. ಚಾಂದ್ ಚೌಡಿ, ಬಡೀ ಚೌಡಿ, ಮುಬಾರಕ್ ಖಾನ್ ಚೌಡಿ, ಮಾಸಾ ಚೌಡಿ, ನೀಮ್ ಚೌಡಿ, ಹಿಲಾಲ್ ಚೌಡಿ, ನಗರ ಚೌಡಿ, ಜಾಮೀನ್ ಚೌಡಿ ಮುಂತಾದ ಅನೇಕ ಬಾವಿಗಳು ಇವೆ. ಬಿಜಾಪುರ ಕೋಟೆಯೆಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಿಗೆ ಬರುವ ಇನ್ನೊಂದು ಪ್ರಮುಖ ವಸ್ತುವಿದೆ. ಅದೆಂದರೆ ಬಿಜಾಪುರದ ಬುರುಜುಗಳ ಮೇಲಿರುವ ತೋಪುಗಳು. ಇವುಗಳಲ್ಲಿ ಮುಖ್ಯವಾದುದು ಮಲಿಕ್-ಇ-ಮೈದಾನ್, ಲಂಡಾ ಖಸ್ಸಾಬ್ ಮತ್ತು ಲಂಬಚರಿ ತೋಪುಗಳು ಬಹು ದೊಡ್ಡದಾಗಿವೆ.

ಚಿತ್ರದುರ್ಗದ ಕೋಟೆ

chitradurgaFort2ಚಿತ್ರದುರ್ಗ ಕೋಟೆಯ ಒಳಗೆ ಏಳು ಬೆಟ್ಟಗಳು ಅಂತರ್ಗತವಾಗಿವೆ. ಏಳುಸುತ್ತಿನ ಈ ಕೋಟೆಯ ೩ ಸುತ್ತನ್ನು ನೆಲದ ಮೇಲೂ ಇನ್ನುಳಿದ ೪ ಸುತ್ತನ್ನು ಬೆಟ್ಟದ ಮೇಲೂ ನಿರ್ಮಾಣ ಮಾಡಲಾಗಿದೆ. ಈ ಕೋಟೆಗೆ ಒಟ್ಟು ೧೯ ಬಾಗಿಲುಗಳು, ೩೫ ಗುಪ್ತಮಾರ್ಗ, ೩೫ ದಿಡ್ಡಿ ಬಾಗಿಲುಗಳು ಮತ್ತು ೪ ಕಳ್ಳಬಾಗಿಲುಗಳೂ ಇವೆ.
ಪೂರ್ವದಿಕ್ಕಿನಿಂದ ಹೊರಟು ಬೆಟ್ಟದ ಅರಮನೆ ಪ್ರದೇಶ ತಲುಪಲು ೯ ಬಾಗಿಲುಗಳನ್ನು ದಾಟಬೇಕು. ಈ ಪೂರ್ವದಿಕ್ಕಿನ ಮುಖ್ಯವಾದ ದ್ವಾರವನ್ನು ರಂಗಯ್ಯನ ಬಾಗಿಲು ಎಂದೂ ಸಿರಾದರ್ವಾಜ ಎಂದೂ ಕರೆಯುತ್ತಾರೆ. ಮೊದಲನೆಯ ಸುತ್ತಿನ ಕೋಟೆಯನ್ನು ದಾಟಿದರೆ ಉತ್ಸವಾಂಬಾ ದೇಗುಲ ದೊರೆಯುತ್ತದೆ. ಇದರ ಪಕ್ಕ ಇರುವ ಬಾಗಿಲು ಗಾರೆಬಾಗಿಲು. ಮೂರನೆಯ ಸುತ್ತಿನ ಬಾಗಿಲಿನ ಹೆಸರು ಕಾಮನ ಬಾಗಿಲು. ಇಲ್ಲಿಯೇ ಎಣ್ಣೆಕೊಳ ಹಾಗೂ ಗವಿಯಿರುವುದು. ಇಲ್ಲಿಂದ ದಕ್ಷಿಣಕ್ಕೆ ೪ ದೊಡ್ಡ ಬೀಸುವ ಕಲ್ಲುಗಳಿವೆ. ಮದ್ದನ್ನು ಅರೆಯಲು ಇದನ್ನು ಆನೆಗಳ ಸಹಾಯದಿಂದ ಉಪಯೋಗಿಸುತ್ತಿದ್ದರು ಎನ್ನುವುದು ಐತಿಹ್ಯ.  ನಾಲ್ಕನೆಯ ಬಾಗಿಲು ಬಳಿಯಿರುವ ಕೊತ್ತಳವನ್ನು ವೀರಭದ್ರ ಕೊತ್ತಳ ಎನ್ನುತ್ತಾರೆ. ಇದನ್ನು ದಾಟಿ ಮುಂದೆ ನೆಡೆದರೆ ೫ನೆಯ ಬಾಗಿಲು ಸಿಗುತ್ತದೆ. ೫ ನೆಯ ಬಾಗಿಲು ಹಾಗೂ ೬ನೆಯ ಬಾಗಿಲುಗಳು ಸುಲಭವಾಗಿ ಗೋಚರವಾಗದಂತೆ ನಿರ್ಮಿಸಲಾಗಿದೆ. ಇದರ ಬಳಿ ಗಣೇಶನ ಗುಡಿಯಿದೆ. ೭ನೇ ಬಾಗಿಲನ್ನು ಪ್ರವೇಶಿಸಿದರೆ ಏಕನಾಥೇಶ್ವರಿ ದೇವಾಲಯ ಸಿಗುತ್ತದೆ. ಕಲ್ಲಿನ ಆಯತಾಕಾರದ ಕಣಜವೂ ಇದೆ. ೮ನೇ ಬಾಗಿಲು ದಾಟಿದರೆ ವಿಶಾಲವಾದ ಬೃಹನ್ಮಠ, ಸಂಪಿಗೆ ಸಿದ್ದೇಶ್ವರ ದೇವಾಲಯ, ಹಿಡಿಂಬೇಶ್ವರ ದೇವಾಲಯ, ತುಪ್ಪದ ಕೊಳ, ದ್ವಾರ ಗೋಪುರ, ಉಯ್ಯಾಲೆ ಕಂಬ, ದೀಪಸ್ಥಂಭಗಳು ದೊರಕುತ್ತವೆ. ಚಿತ್ರದುರ್ಗದ ಬಹಳ ಮುಖ್ಯವಾದ ರಚನೆಗಳಿವು.
೯ನೆಯ ಬಾಗಿಲನ್ನು ದಾಟಿದರೆ ಗೋಪಾಲಕೃಷ್ಣ ದೇಗುಲ ಸಿಗುತ್ತದೆ. ಇಲ್ಲಿ ಮದ್ದಿನಮನೆ, ಗುಪ್ತಗುಹೆ, ಗೋಪಾಲಸ್ವಾಮಿ ಹೊಂಡ, ಅರಮನೆ ಬಯಲುಗಳು ಇವೆ. ಅರಮನೆಯಂತಹ ಅನೇಕ ದೊಡ್ಡ ದೊಡ್ಡ ಕಟ್ಟಡಗಳು ಇಲ್ಲಿವೆ. ಇವುಗಳನ್ನು ಮಣ್ಣಿನಿಂದ ಕಟ್ಟಲಾಗಿದೆ. ಇಲ್ಲಿ ಭಾರೀ ಕಣಜಗಳು ಹಾಗೂ ಮುದ್ರಾಶಾಲೆಗಳಿವೆ. ಇದು ಚಿತ್ರದುರ್ಗದ ಆತ್ಮಪ್ರದೇಶವಾಗಿದೆ. ಈ ಪ್ರದೇಶದ ಸುತ್ತಲೂ ಬೆಟ್ಟಗಳಿರುವುದರಿಂದ ಸ್ವಾಭಾವಿಕವಾದ ರಕ್ಷಣೆ ಇದ್ದೇ ಇದೆ. ಆದರೂ ಸುತ್ತಲೂ ಇರುವ ಬೆಟ್ಟಗಳ ಮೇಲೆ ಬತೇರಿಗಳನ್ನು ನಿರ್ಮಿಸಿ ಯಾವ ಶತ್ರುವೂ ಒಳನುಸುಳದಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನೆಲ್ಲಿಕಾಯಿ ಸಿದ್ಧೇಶ್ವರ ಬತೇರಿ, ಝಂಡಾ ಬತೇರಿ, ಲಾಲ್ ಬತೇರಿ, ತುಪ್ಪದ ಕೊಳದ ಬತೇರಿ, ಕಹಳೆ ಬತೇರಿ, ಬಸವನ ಬತೇರಿ ಮುಖ್ಯವಾದ ಬತೇರಿಗಳಾಗಿವೆ. ಚಿತ್ರದುರ್ಗದ ಪಾಳೆಯಗಾರರು, ಈ ಕೋಟೆಯನ್ನು ಅತ್ಯಂತ ಸದೃಢವಾಗಿ ಕಟ್ಟಿ ಮೆರೆದರು. ದೊಡ್ಡ ದೊಡ್ಡ ಭಾರೀ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ೧೪ ದೇವಾಲಯಗಳು ಈ ಕೋಟೆಯಲ್ಲಿವೆ. ಈ ಕೋಟೆಯ ಎತ್ತರ ೧೫ರಿಂದ ೪೦ ಅಡಿಗಳಲ್ಲಿ ಇವೆ. ಕೆಲವು ಕಡೆ ಇಟ್ಟಿಗೆ ಗೋಡೆಗಳನ್ನು ಈ ಕೋಟೆ ಗೋಡೆಯ ಮೇಲೆ ಕಟ್ಟಲಾಗಿದೆ. ಹೊರಗಿನ ೩ ಸುತ್ತು ಗೋಡೆಗಳ ಸುತ್ತ ಕಂದಕಗಳಿವೆ.

ಬೀದರ್ ಕೋಟೆ

bidarFort1ಕರ್ನಾಟಕದ ಅತ್ಯಂತ ಸುಂದರ ಕೋಟೆಗಳಲ್ಲಿ ಬೀದರ್ ಕೋಟೆ ಪ್ರಮುಖವಾದುದು. ಸುಮಾರು ೪ ಕಿ.ಮೀ. ಸುತ್ತಳತೆಯನ್ನು ಹೊಂದಿದೆ. ಬಹಳ ಏರು-ತಗ್ಗುಗಳಿರುವ ಸ್ವಾಭಾವಿಕ ಪರಿಸರದಲ್ಲಿ ನಿರ್ಮಾಣವಾದ ಈ ಕೋಟೆಯು ಇರುವ ಜಾಗವನ್ನು ಸಂಪೂರ್ಣವಾಗಿ ಉಪಯೋಗಿಸಕೊಳ್ಳಲಾಗಿದೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಉತ್ತರ ಭಾಗದಲ್ಲಿ ಕಂದಕವನ್ನು ಇಲ್ಲಿನ ಬಂಡೆಯನ್ನು ಕೊರೆದು ಮಾಡಲಾಗಿದೆ. ಒಂದಾದ ಮೇಲೊಂದರಂತೆ ೩ ಕಂದಕಗಳನ್ನು ಮಾಡಲಾಗಿದೆ. ಕೋಟೆಯ ಕಂದಕಗಳಿಂದ ಕೆಲವು ಬಾಗಿಲುಗಳಿಗೆ ಸುರಂಗವನ್ನು ಕೂಡ ನಿರ್ಮಿಸಲಾಗಿದೆ. ಬೀದರ್ ಕೋಟೆಗೆ ೮ ಪ್ರಮುಖ ಹೊರಕೋಟೆಯ ಬಾಗಿಲುಗಳಿವೆ. ಅವುಗಳಲ್ಲಿ ಮೊದಲನೆಯದು ಶೆರ್ಜ ದರ್ವಾಜ. ಕೋಟೆಯ ಆಗ್ನೇಯ ದಿಕ್ಕಿನಲ್ಲಿರುವ ಈ ಬಾಗಿಲು ಮುಖ್ಯದ್ವಾರವಾಗಿದೆ. ಈ ಬಾಗಿಲಿಗೆ ಚೂಪಾದ ಭಾರೀ ಮೊಳೆಗಳನ್ನು ಅಳವಡಿಸಿಲಾಗಿದೆ. ಇದನ್ನು ೧೬೮೩ ರಲ್ಲಿ ಮುಖ್ತಾರ್ ಖಾನ್ ಅಲ್ ಹುಸೇನಿ ನಿರ್ಮಿಸಿದನು. ಎರಡನೆಯ ಬಾಗಿಲನ್ನು ಮಾಂಡು ದರ್ವಾಜ (ಪೂರ್ವ), ಮೂರನೆಯದು ಕಲಮಡಗಿ ದರ್ವಾಜ, ನಾಲ್ಕನೆಯದು ದಿಲ್ಲಿ ದರ್ವಾಜ, ಐದನೆಯದು ಕಲ್ಯಾಣಿ ದರ್ವಾಜ, ಆರನೆಯದು ಕರ್ನಾಟಕದ ದಾರ್ವಾಜಗಳಾಗಿದ್ದು ಉಳಿದೆರಡು ಬಾಗಿಲುಗಳ ಹೆಸರುಗಳು ತಿಳಿದುಬರುವುದಿಲ್ಲ.
ಮಾಂಡು ದರ್ವಾಜದ ಬಾಗಿಲನ್ನು ಬಹುಭುಜಾಕೃತಿಯ ಬುರುಜಿನ ಹಾಗೆ ನಿರ್ಮಿಸಲಾಗಿದೆ. ಇಲ್ಲಿ ಕಾವಲುಗಾರರ ಮನೆಗಳಿವೆ. ಸುರಂಗ ಮೂಲಕವಾಗಿ ಒಳಗೆ ತಖ್ತ್ ಮಹಲ್, ತರ್ಕಷ್ ಮಹಲ್, ರಂಗೀನ ಮಹಲ್, ಗಗನ್ ಮಹಲ್ ಎಂಬ ಅರಮನೆಗಳಿವೆ. ಈ ಅರಮನೆಗಳಲ್ಲಿ ಬಣ್ಣಬಣ್ಣದ ಅಲಂಕಾರಗಳನ್ನು ಮಾಡಲಾಗಿದೆ. ಇವುಗಳಲ್ಲಿ ಅಡಿಗೆ ಮನೆಗಳು, ದರ್ಬಾರ್ ಸಭಾಂಗಣ, ಸೇರಾಖಂಬ್ ಮಸೀದಿ, ನೌಬತ್ ಖಾನೆಗಳು, ಮದ್ದಿನ ಮನೆಗಳು ಇವೆ. ಕೋಟೆಯ ದಕ್ಷಿಣಕ್ಕೆ ನಗರದ ಸುತ್ತಲೂ ಒಂದು ಸುತ್ತಿನ ಕೋಟೆಯಿದೆ. ೧೫ನೆಯ ಶತಮಾನದಲ್ಲಿ ನಿರ್ಮಾಣವಾದ ಈ ಕೋಟೆಯಲ್ಲಿ ೫ ದ್ವಾರಗಳಿವೆ. ಷಾಹಾಗಂಜ್ ದರ್ವಾಜ, ಫತೇ ದರ್ವಾಜ, ಮಂಗಲ್ ಪೇಟೆ ದರ್ವಾಜ, ದುಲ್ ಹನ್ ದರ್ವಾಜ, ತಲ್ ಘಾಟ್ ದಾರ್ವಾಜಗಳು ಪ್ರಮುಖವಾದವು. ಈ ಕೋಟೆಯ ಮೇಲಿರುವ ಬುರುಜುಗಳ ಮೇಲೆ ಅದ್ಭುತವಾದ ತೋಪುಗಳಿವೆ. ಮುಂಡಾ ಬುರುಜಿನ ಮೇಲೆ ತೋಪ್-ಇ-ಮಹ್ರೂದ್ ಶಾಹಿ, ಉತ್ತರ ಬುರುಜಿನ ಮೇಲೆ ಫತ್ ಲಷ್ಕರ್ (ಸೈನ್ಯದಲ್ಲಿ ಜಯ ತಂದುಕೊಟ್ಟ ತೋಪು), ದಿಲ್ಲಿ ದರ್ವಾಜ ಬಳಿ ಕಲ್ಯಾಣಿ ಬುರುಜಿನ ಮೇಲೆ ಮಹಮದ್ ಕಾಸಿಮನ ತೋಪಿದೆ. ಇವನ ಹೆಸರಿರುವ ಇನ್ನೊಂದು ತೋಪು ಪೇಟ್ಲಾ ಬುರುಜಿನ ಮೇಲಿದೆ ಮತ್ತು ಲಾಲ್ ಬುರುಜಿನ ಮೇಲೆ ತೋಪ್-ಎ-ಹೈದರ್ ಇದೆ. ಇವಲ್ಲದೆ ಇನ್ನೂ ಮುಂತಾದ ತೋಪುಗಳಿವೆ.
ಆನೆಗೊಂದಿ ಕೋಟೆ
anegundiFort1ಹಂಪಿಯ ತುಂಗಭದ್ರೆಯನ್ನು ದಾಟಿದರೆ ಆ ದಡದಲ್ಲಿರುವುದೇ ಆನೆಗೊಂದಿ. ನೈಸರ್ಗಿಕವಾಗಿ ಅತ್ಯಂತ ಸುರಕ್ಷಿತ ಪ್ರದೇಶವಾಗಿದೆ. ಆನೆಗೊಂದಿಯ ಪೂರ್ವದಿಂದ ದಕ್ಷಿಣದವರೆಗೆ ತುಂಗಭದ್ರೆಯು ಹರಿಯುವುದರಿಂದ ಹಾಗೂ ದಕ್ಷಿಣದಿಂದ ಪಶ್ಚಿಮ ದಿಕ್ಕಿನವರೆಗೆ ಸುತ್ತಲೂ ಬೆಟ್ಟಗಳು ಹಬ್ಬಿರುವುದರಿಂದ ಅತ್ಯಂತ ಭದ್ರವಾದ ಪ್ರದೇಶವಾಗಿದೆ. ನೆಲದ ಮೇಲೆಯೂ ಹಾಗೂ ಬೆಟ್ಟದ ಮೇಲೆಯೂ ಕೋಟೆಯನ್ನು ಕಟ್ಟಲಾಗಿದೆ.
ಆನೆಗೊಂದಿಯ ಮೊದಲನೆಯ ಸುತ್ತಿನ ಕೋಟೆಯು ಊರ ಸುತ್ತಲೂ ಕಟ್ಟಿರುವ ಗೋಡೆಯಾಗಿದೆ. ಗಂಗಾವತಿಗಿರುವ ಬಾಗಿಲನ್ನು ಕಡೇ ಬಾಗಿಲು ಎನ್ನುತ್ತಾರೆ. ಇದನ್ನು ದಾಟಿಯೇ ನಾವು ಕೋಟೆಯನ್ನು ಪ್ರವೇಶಿಸಬೇಕು. ಇದಾದ ಮೇಲೆ ಗೋರಿ ಬಾಗಿಲು, ಸುಂಕದ ಬಾಗಿಲನ್ನು ಬಡಗಣೆ (ಉತ್ತರ) ಬಾಗಿಲು ಎಂದು ಕೂಡ ಕರೆಯಲಾಗುತ್ತಿತ್ತು. ಅಗಸೆ ಬಾಗಿಲು ಈಗ ಅನಾಥವಾಗಿ ನಿಂತಿದೆ. ಹಂಪಿಯ ಕಡೆಯಿಂದ ನದಿಯನ್ನು ದಾಟಿ ಬಂದರೆ ಸಿಗುವ ಬಾಗಿಲನ್ನು ಅಂಬಿಗರ ಬಾಗಿಲು ಎನ್ನುತ್ತಾರೆ. ಆನೆಗೊಂದಿ ಬೆಟ್ಟದ ಮೇಲೆ ಕಟ್ಟಿರುವ ಕೋಟೆಯು ಉತ್ತರ ದಿಕ್ಕಿನಿಂದ ಮುಖ್ಯದ್ವಾರವನ್ನು ಹೊಂದಿ ದಕ್ಷಿಣದ ಕಡೆಗೆ ಮೆಟ್ಟಿಲುಗಳಿವೆ. ಈ ಗೋಡೆಯಲ್ಲಿ ಬಾಗಿಲು ಕಾಣದಂತೆ ಎತ್ತರವಾಗಿ ನಿರ್ಮಿಸಲಾಗಿದೆ. ಹತ್ತಿರಕ್ಕೆ ಬಂದು ನೋಡಿದರೆ ಮಾತ್ರ ಬಾಗಿಲು ಕಾಣುತ್ತದೆ. ಎರಡೆರಡು ಬಾಗಿಲುಗಳನ್ನು ದಾಟಿ ಒಳಗೆ ನಡೆದರೆ ಒಂದು ಆಯತಾಕಾರದ ಕಟ್ಟಡವಿದೆ. ನಾಲ್ಕು ಕಾವಲು ಗೋಪುರಗಳಿವೆ. ಬಹಳ ಚಿಕ್ಕದಾದ ಈ ಕೋಟೆಯ ಭಾಗದಲ್ಲಿ ೨ ಕೊಳಗಳಿವೆ.
ಇನ್ನು ಬೆಟ್ಟದ ಮೇಲೆ ನಗರಕ್ಕೆ ಹೊಂದಿಕೊಂಡಿರುವ ದಕ್ಷಿಣ ಕೋಟೆಯು ದೊಡ್ಡದಾಗಿದೆ. ಎತ್ತರವಾದ ಬೆಟ್ಟದ ತುದಿಯಿಂದ ಹಿಡಿದು ಕಡಿಮೆ ಎತ್ತರದ ಸಮತಟ್ಟಾದ ಜಾಗದವರೆಗೆ ಈ ಕೋಟೆಯನ್ನು ನಿರ್ಮಿಸಲಾಗಿದೆ. ಮೇಲಿನ ಭಾಗದ ಕೋಟೆಯಲ್ಲಿ ೩ ಬಾಗಿಲುಗಳಿದ್ದು ಅಕ್ಕಪಕ್ಕದಲ್ಲಿ ಎರಡೆರಡು ಕೊತ್ತಳಗಳಿವೆ. ಪ್ರತೀ ಪ್ರವೇಶಗಳಲ್ಲಿಯೂ ೮ ಕಂಬಗಳ ಮಂಟಪವಿದೆ. ಕೋಟೆಯಲ್ಲಿ ವಿಶಾಲವಾದ ವಾಸದ ಕಟ್ಟಡ, ಬಾವಿ, ಎರಡು ಸಮಾಧಿಗಳು, ಆರು ಕಣಜಗಳಿವೆ. ೫ ಕಾವಲು ಗೋಪುರಗಳು ಕೂಡ ಇಲ್ಲಿವೆ. ಮಧ್ಯದ ಕೋಟೆ, ಕೊತ್ತಳದ ನಡುವೆ ಇರುವ ದ್ವಾರದಿಂದ ಪ್ರವೇಶಿಸಬೇಕು. ಈ ಕೊತ್ತಳದ ಗೋಡೆಯಲ್ಲಿ ಬಂದೂಕಿನ ಸಂದುಗಳಿವೆ. ಇದರಲ್ಲಿಯೂ ಒಂದು ದೊಡ್ಡ ಕಟ್ಟಡವಿದೆ. ನಾಲ್ಕು ಕಣಜಗಳಿವೆ, ನೀರಿನ ಕೊಳಗಳಿವೆ. ಕೆಳಗಿರುವ ಕೋಟೆಯು ಚಿಕ್ಕದಾಗಿದೆ. ಒಳಗೆ ಯಾವ ಕಟ್ಟಡಗಳೂ ಇಲ್ಲ. ದಕ್ಷಿಣಕ್ಕೆ ಒಂದು ಬಾಗಿಲಿದೆ. ಬಾಗಿಲಿನ ಎರಡೂ ಕಡೆ ಎತ್ತರವಾದ ಜಗುಲಿಯಿದೆ, ನಾಲ್ಕು ಕಂಬಗಳಿವೆ. ಈ ಕೋಟೆಯನ್ನು ಕಟ್ಟಿರುವ ಉದ್ದೇಶವೇ ನದಿಯ ಕಡೆಯಿಂದ ಯಾರೂ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದಂತೆ ಎಚ್ಚರ ವಹಿಸುವುದಾಗಿದೆ.

 ಬಸವ ಕಲ್ಯಾಣ ಕೋಟೆ
Basavakalyan Fort3ಕಲ್ಯಾಣದ ಚಾಲುಕ್ಯರ ರಾಜಧಾನಿಯಾಗಿ ಆರಂಭಗೊಂಡ ಕಲ್ಯಾಣದಲ್ಲಿ ಮೊದಲು ಕಲ್ಯಾಣದ ಚಾಲುಕ್ಯರು ಕೋಟೆಯೊಂದನ್ನು ನಿರ್ಮಿಸಿದರು. ನಂತರ ಕಳಚೂರಿಗಳು, ನಂತರ ಸೇವುಣರು, ನಂತರ ಕಾಕತೀಯರು, ದೆಹಲಿ ಸುಲ್ತಾನರು, ಬಹಮನಿ ಅರಸರು, ಬರೀದ್ ಶಾಹಿಗಳು, ಆದಿಲ್ ಶಾಹಿಗಳು, ವಿಜಯನಗರದ ಅರಸರು, ವಿಜಯನಗರದವರ ಪರವಾಗಿ ಕೆಳದಿ ನಾಯಕರು, ಔರಂಗಜೇಬ್ ಮತ್ತು ಹೈದ್ರಾಬಾದ್ ನಿಜಾಮ ನಿರಂತರವಾಗಿ ಈ ಪ್ರದೇಶವನ್ನು ಆಳಲು ಹವಣಿಸುತ್ತಿದ್ದರು ಎಂದ ಮೇಲೆ ಈ ಸ್ಥಳ ಎಷ್ಟು ಸಂಪದ್ಭರಿತವಾದದ್ದು ಎಂದು ಊಹಿಸಿಕೊಳ್ಳಬೇಕಾಗುತ್ತದೆ. ಬಸವ ಕಲ್ಯಾಣದ ಕೋಟೆಯು ೩ ಸುತ್ತಿನ ಕೋಟೆ. ಇದರ ಆಕಾರ ದೀರ್ಘ ವೃತ್ತಾಕಾರವಾಗಿದೆ. ಮೊದಲನೆಯ ಹಾಗೂ ಎರಡನೆಯ ಸುತ್ತನ್ನು ಬೆಟ್ಟದ ಬುಡದಲ್ಲಿ ಕಟ್ಟಲಾಗಿದೆ. ಬೆಟ್ಟದ ಮೇಲಿರುವ ಮೂರನೆಯ ಸುತ್ತು ಈ ಕೋಟೆಯ ಆತ್ಮವಾಗಿದೆ.
ಹೊರಕೋಟೆಯ ದ್ವಾರವು ದೂರದಿಂದ ಕಾಣದಂತೆ ಮುಂದೆ ಮಂಟಪವೊಂದನ್ನು ಕಟ್ಟಲಾಗಿದೆ. ಕೋಟೆಯ ಒಳಭಾಗದಲ್ಲಿ ಸುತ್ತಲೂ ಕೈಸಾಲೆಯಿದೆ. ಮಧ್ಯದಲ್ಲಿ ಕಾರಂಜಿಯಿದೆ. ದಕ್ಷಿಣದಲ್ಲಿ ಒಂದು ವೇದಿಕೆಯನ್ನು ನಿರ್ಮಾಣ ಮಾಡಿದ್ದು ಸುಲ್ತಾನರು ಆನೆಯ ಮೇಲೆ ಹತ್ತಲು ಸಹಕಾರಿಯಾಗಿದೆ. ವಿಶೇಷವೆಂದರೆ ಕಂದಕದ ನಡುವೆ ಇರುವ ಸೇತುವೆ. ಉತ್ತರಕ್ಕೆ ಬಂದೀಖಾನೆಯಿದೆ. ಇದರಲ್ಲಿ ೫ ಕೋಣೆಗಳಿವೆ. ಬಾರೂದ್ ಖಾನ (ಮದ್ದಿನ ಮನೆ) ಐದನೆಯ ಬಾಗಿಲಿನ ಬಳಿ ಇದೆ. ಕೊನೆಯ, ಮೂರನೆಯ ಸುತ್ತಿನ ಕೋಟೆಯನ್ನು ಪ್ರವೇಶಿಸಲು ೭ ದ್ವಾರಗಳು ನಾವು ದಾಟಬೇಕಾಗುತ್ತದೆ. ಈ ಅಂತಿಮ ಹೃದಯಭಾಗದಲ್ಲಿನ ಬಾಗಿಲಿನ ಎರಡೂ ಕಡೆ ದೊಡ್ಡ ಬುರುಜುಗಳಿವೆ. ಇದರಲ್ಲಿ ರಾಜಮಹಲ್, ಹೈದರ್ ಮಹಲ್, ಮಸೀದಿ, ಕಬೂತರ್ ಖಾನ (ಪಾರಿವಾಳಗಳ ಮನೆ), ಗರಡಿ ಮನೆ, ಮದ್ದಿನ ಮನೆ, ಬಾವಿ, ಕಾರಂಜಿಗಳು ಎಲ್ಲವೂ ಇವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿರುವ ಒಂದು ಕಟ್ಟಡವನ್ನು ಬಿಜ್ಜಳನ ಅರಮನೆಯೆಂದು ಗುರುತಿಸಲಾಗುತ್ತದೆ.
ಒಟ್ಟಿನಲ್ಲಿ ೩ ಸುತ್ತಿನ ೭ ಬಾಗಿಲಿನ ಈ ಬಸವ ಕಲ್ಯಾಣದ ಕೋಟೆಯು ಇಂದಿಗೆ ಅಲ್ಲಲ್ಲಿ ಹಾಳಾಗಿದ್ದರೂ ಅತ್ಯಂತ ಸುಂದರವಾದ ಕೋಟೆಯಾಗಿದೆ. ಇಲ್ಲಿ ೧೪ ಬುರುಜುಗಳು ಮಧ್ಯದ ಸುತ್ತಿನ ಎತ್ತರವಾದ ಗೋಡೆಯಲ್ಲಿದೆ. ಈ ಬುರುಜುಗಳಲ್ಲಿ ಕೆಲವೆಡೆ ಚಿಕ್ಕ ತೋಪುಗಳು ಕೆಲವು ಕಡೆ ದೊಡ್ಡ ತೋಪುಗಳೂ ಇದೆ. ತೋಪುಗಳು ಎತ್ತರವಾದ ವೃತ್ತಾಕಾರದ ವೇದಿಕೆಗಳಲ್ಲಿ ವ್ಯವಸ್ಥಿತವಾಗಿ ಇಡಲಾಗಿದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ತೋಪೆಂದರೆ ಹೈದರ್ ಮಹಲ್ ಬಳಿಯಿರುವ ೭.೯೪ ಮೀ ಉದ್ದದ ನವ್ ಗಂಜ್ ತೋಪು.
ಗುಲ್ಬರ್ಗ ಕೋಟೆ
gulbargaFort3
ಅಲಾ ಉದ್ದೀನ್ ಕಾಲದಲ್ಲಿ (೧೩೪೭-೫೮) ನಿರ್ಮಾಣವಾದ ಗುಲ್ಬರ್ಗ ಕೋಟೆಯ ಸುತ್ತಳತೆ. ಸು. ೩ ಕಿ.ಮೀಗಳಷ್ಟು. ಅತ್ಯಂತ ಭದ್ರವಾದ ಕರ್ನಾಟಕದ ಕೋಟೆಗಳಲ್ಲಿ ಒಂದು. ಈ ಕೋಟೆಯಲ್ಲಿ ೧೫ ಬುರುಜುಗಳಿವೆ ಹಾಗೂ ೨೦ ತುಪಾಕಿ ಗೋಪುರಗಳಿವೆ. ಕೋಟೆಯ ಸುತ್ತಲೂ ಆಳವಾದ ಮತ್ತು ಅಗಲವಾದ ಕಂದಕವಿದೆ. ಈ ಕೋಟೆಗೆ ಪೂರ್ವ ಹಾಗೂ ವಾಯುವ್ಯ ದಿಕ್ಕುಗಳಲ್ಲಿ ಪ್ರಧಾನ ದ್ವಾರಗಳಿವೆ. ಪೂರ್ವದಲ್ಲಿ ಒಳಗಿರುವ ಬಾಗಿಲಿನ ಭಾಗ ಹಾಳಾಗಿದ್ದರೆ ಹೊರಗಡೆಯ ಭಾಗ ಸದೃಢವಾಗಿದೆ. ವಾಯುವ್ಯ ದಿಕ್ಕಿನಲ್ಲಿರುವ ಬಾಗಿಲು ೫ ಬಾಗಿಲುಗಳ ದೊಡ್ಡ ಸಂಕೀರ್ಣವಾಗಿದೆ. ಹೊರಬಾಗಿಲಿನಲ್ಲಿ ಮೊಳೆಗಳಿಂದ ತುಂಬಿದ ಪ್ರಾಚೀನ ಬಾಗಿಲನ್ನು ಈಗಲೂ ಕಾಣಬಹುದು. ಈ ಮೊಳೆಗಳು ಇಂದಿನ screw ತರಹ ತಿರುಗಿಸಬಹುದಾದದ್ದು. ಪ್ರತಿ ಕದದ ಮೇಲೆ ಇಂತಹ ೩೬ ಮೊಳೆಗಳಿವೆ. ಆನೆಗಳು ಈ ಬಾಗಿಲನ್ನು ತಳ್ಳಲು ಆಗದಂತೆ ಇಂತಹ ಮೊಳೆಗಳನ್ನು ಅಳವಡಿಸಲಾಗಿದೆ. ಒಂದು screw ಎಂದರೆ ಅದು ನಾಲ್ಕು ಮೊಳೆಗಳ ವಿಶಿಷ್ಟವಾದ ಬಂಧ.
ಅನೇಕ ರೀತಿಯ ಬುರುಜುಗಳು ಗುಲ್ಬರ್ಗ ಕೋಟೆಯಲ್ಲಿದೆ. ಬುರುಜುಗಳು ಮೇಲೆ ಆಳೆತ್ತರದ ತೆನೆಗಳಿದ್ದು ಅದರ ಸಂದಿನಿಂದ ಚಲಾಯಿಸುವಂತೆ ತೋಪುಗಳನ್ನು ಮಧ್ಯದಲ್ಲಿ ನೆಡಲಾಗಿದೆ. ಗುಲ್ಬರ್ಗದ ಸೇನೆಯಲ್ಲಿ ಬಂದೂಕಗಳ ಚಲಾವಣೆಯೂ ಪ್ರಚಲಿತವಿದ್ದರಿಂದ ಬಂದೂಕುಗಳನ್ನು ಇಟ್ಟು ಚಲಾಯಿಸಲು ಸಣ್ಣ ಸಣ್ಣ ಕಿಂಡಿಗಳೂ ಇವೆ. ಗುಲ್ಬರ್ಗ ಕೋಟೆಯ ಬುರುಜುಗಳಲ್ಲಿ ಉದ್ದ ಪಟ್ಟಿ ಮತ್ತು ಬಳೆಗಳಿಂದ ಮಾಡಿದ ದೊಡ್ಡ ತೋಪಿದೆ. ಒಂದು ತೋಪಿನ ಮೇಲೆ ಶಾಸನವೂ ಇದೆ. ಒಟ್ಟಿನಲ್ಲಿ ಗುಲ್ಬರ್ಗದ ಕೋಟೆಯ ಯಾವ ಮೂಲೆಯನ್ನೂ ದಾಟಿ ಯಾವೊಬ್ಬ ಶತ್ರುವೂ ಒಳಗೆ ಸುಳಿಯಲಾಗದಂತಹ ವೈಜ್ಞಾನಿಕ ರಚನೆ ಇದಾಗಿದೆ. ಗುಲ್ಬರ್ಗ ಕೋಟೆಯ ಒಳಗೆ ಮಧ್ಯದಲ್ಲಿ ಜಾಮಿಯಾ ಮಸೀದಿ ಎಂಬ ಅತ್ಯಂತ ದೊಡ್ಡ ಮಸೀದಿಯಿದೆ. ೨೧೬ ಅಡಿ ಉದ್ದ ೧೭೬ ಅಡಿ ಅಗಲವಿರುವ ಈ ಮಸೀದಿಯನ್ನು ೧೩೬೭ ರಲ್ಲಿ ಕಟ್ಟಲಾಯಿತು. ಮಹಮದ್ ಶಾಹ್ ಬಹಮನಿಯ ಕಾಲದ ಅತ್ಯಂತ ಪ್ರಮುಖ ರಚನೆಗಳಲ್ಲಿ ಇದೂ ಒಂದು. ಈ ಮಸೀದಿಯ ವಿಶೇಷತೆಯೇನೆಂದರೆ ಇಡೀ ಏಷ್ಯಾದಲ್ಲಿಯೇ ಈ ವಿನ್ಯಾಸವನ್ನು ಹೊಂದಿರುವ ಇನ್ನೊಂದು ಮಸೀದಿಯಿಲ್ಲ.

ಉಚ್ಚಂಗಿ ದುರ್ಗ

ucchangiFort3ಉಚ್ಚಂಗಿ ದುರ್ಗವು ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಿಂದ ಸುಮಾರು ೩೦ ಕಿ.ಮೀ. ದೂರದಲ್ಲಿದೆ. ಇತಿಹಾಸದಲ್ಲಿ ಅನೇಕ ರಾಜರ ಬಿರುದುಗಳಿಗೆ ಕಾರಣವಾದದ್ದೇ ಈ ಅಭೇದ್ಯ ಉಚ್ಚಂಗಿ ದುರ್ಗ. ಗಂಗ ವಂಶದ ಎರಡನೆಯ ಮಾರಸಿಂಹನ ಪರವಾಗಿ ಚಾಲುಕ್ಯರ ಮೇಲೆ ಯುದ್ಧ ಮಾಡಿ ಈ ಕೋಟೆಯನ್ನು ವಶಪಡಿಸಿಕೊಂಡ ಚಾವುಂಡರಾಯನು ‘ರಣರಂಗ ಸಿಂಹ’ ಎಂಬ ಬಿರುದನ್ನು ಪಡೆದುಕೊಂಡನು. ವಿಷ್ಣುವರ್ಧನ ಇದನ್ನು ಗೆದ್ದು ‘ಉಚ್ಚಂಗಿಗೊಂಡ’ ಎಂಬ ಬಿರುದನ್ನು ಪಡೆದನು. ಬಲ್ಲಾಳನು ಈ ಕೋಟೆಯನ್ನು ಗೆದ್ದು ‘ಗಿರಿದುರ್ಗ ಮಲ್ಲ’ ಎಂಬ ಬಿರುದನ್ನು ಧರಿಸಿದನು. ಶನಿವಾರವೇ ಅವನು ಈ ಕೋಟೆಯನ್ನು ಗೆದ್ದುದರಿಂದ ‘ಶನಿವಾರ ಸಿದ್ಧಿ’ ಎಂಬ ಬಿರುದೂ ಸಹ ಇವನಿಗೆ ಸೇರಿತು.
ನೈಸರ್ಗಿಕವಾಗಿ ಅತ್ಯಂತ ದುರ್ಗಮವಾದ ಬೆಟ್ಟದಲ್ಲಿ ಉಚ್ಚಂಗಿ ಕೋಟೆಯನ್ನು ನಿರ್ಮಿಸಲಾಗಿದೆ. ಎರಡು ಬೆಟ್ಟಗಳೂ ಹಾಗೂ ಅವುಗಳ ನಡುವೆ ಇರುವ ಬಯಲು ಇವುಗಳನ್ನು ಒಳಗೊಂಡು ಕೋಟೆಯನ್ನು ನಿರ್ಮಿಸಲಾಗಿದೆ.ಹೊರಗಿನಿಂದ ಕೋಟೆಯನ್ನು ಪ್ರವೇಶಿಸುವ ಮೊದಲ ಬಾಗಿಲನ್ನು ಮಳಿ ಬಾಗಿಲು ಎನ್ನುತ್ತಾರೆ. ಈ ಬಾಗಿಲಿನ ಅಕ್ಕಪಕ್ಕದಲ್ಲಿ ಚೌಕಾಕಾರದ ಎರಡು ಕೊತ್ತಳಗಳು ಇದೆ. ಈ ಬಾಗಿಲು ಉತ್ತರಕ್ಕಿದೆ. ಇದನ್ನು ದಾಟಿದರೆ ಸಿಗುವ ಎರಡನೆಯ ಬಾಗಿಲು ಕೂಡ ಉತ್ತರಾಭಿಮುಖವಾಗಿದೆ. ಈ ಎರಡೂ ಬಾಗಿಲುಗಳನ್ನು ದಾಟಿ ಮುನ್ನಡೆದರೆ ಎರಡನೆಯ ಸುತ್ತಿನ ಕೋಟೆಯು ಸಿಗುತ್ತದೆ. ಇಲ್ಲಿಂದ ಸಿಗುವ ೩ ನೇ ಬಾಗಿಲಿನಿಂದ ಪಶ್ಚಿಮದ ಕಡೆಗೆ ಹೊರಟರೆ ಎರಡು ಬೆಟ್ಟಗಳ ನಡುವಿನ ಬಯಲು ಪ್ರದೇಶ ಸಿಗುತ್ತದೆ. ನೀರಿನ ಅನುಕೂಲಕ್ಕಾಗಿ ಎರಡು ಬಾವಿಗಳನ್ನು ಇಲ್ಲಿ ತೋಡಲಾಗಿದೆ.
ಉಚ್ಚಂಗಿ ದುರ್ಗದ ಈ ಭಾಗದಲ್ಲಿ ಅರಮನೆಯ ಭಾಗವಿದೆ. ಕೇವಲ ವಿಶಾಲವಾದ ಅಧಿಷ್ಠಾನ ಮಾತ್ರ ಇಂದಿಗೆ ಉಳಿದುಕೊಂಡಿದೆ. ಇಲ್ಲಿಂದ ಎರಡು ದಾರಿಗಳು ಕವಲೊಡೆಯುತ್ತದೆ. ಒಂದು ದಾರಿ ಬೆಟ್ಟದ ತುದಿಯ ಉಚ್ಚಂಗಿಯಮ್ಮನ ದೇಗುಲಕ್ಕೆ ಹೋದರೆ ಇನ್ನೊಂದು ದಾರಿ ಚಿಕ್ಕ ಬೆಟ್ಟಕ್ಕೆ ಕರೆದೊಯ್ಯುತ್ತದೆ. ಚಿಕ್ಕ ಬೆಟ್ಟಕ್ಕೆ ಹೋಗುವ ಬಾಗಿಲನ್ನು ಹರಿಹರರ ಬಾಗಿಲು ಎನ್ನುತ್ತಾರೆ. ನಾಲ್ಕನೆಯ ಬಾಗಿಲು ಹಾಳಾಗಿದೆ, ಐದನೆಯ ಬಾಗಿಲು ಎರಡು ಚೌಕಾಕಾರದ ಕೊತ್ತಳಗಳ ನಡುವೆ ಇದೆ. ಈ ಬಾಗಿಲಿನ ಎರಡೂ ಕಡೆ ಎತ್ತರಿಸಿದ ಜಗಲಿಯಿದೆ. ಆರನೆಯ ಬಾಗಿಲು ಕೂಡ ಇಂದಿಗೆ ಹಾಳಾಗಿದೆ. ೭ನೆಯ ಬಾಗಿಲು ಉಚ್ಚಂಗಿ ದುರ್ಗದ ಕಡೆಯ ಬಾಗಿಲು ಇದೂ ಕೂಡ ಬಿದ್ದು ಹಾಳಾಗಿದೆ. ಏಳು ಬಾಗಿಲುಗಳನ್ನು ದಾಟಿ ಕೋಟೆಯ ಅಂತ್ಯಭಾಗಕ್ಕೆ ಬಂದರೆ ಉಚ್ಚಂಗಿ ದುರ್ಗದ ಅಧಿದೇವತೆಯಾದ ಉಚ್ಚಂಗಿಯಮ್ಮನ ದೇವಾಲಯವಿದೆ.


ಮಳಖೇಡ ಕೋಟೆ 

malkhedfort1ಮಳಖೇಡ ಕೋಟೆಯು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿದೆ. ೮-೧೦ ನೆಯ ಶತಮಾನದವರೆಗೆ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಳಖೇಡದಲ್ಲಿ ಇಂದಿಗೆ ಆ ಕಾಲದ ಕೆಲವು ಅವಶೇಷಗಳು ಮಾತ್ರ ಕಂಡುಬರುತ್ತದೆ. ಆದರೆ ಈಗಿರುವ ಕೋಟೆಯು ೧೭ ನೆಯ ಶತಮಾನದಲ್ಲಿ ರಚನೆಗೊಂಡಿದೆ.
ಕಾಗಿನಾ ನದಿಯ ದಂಡೆಯ ಮೇಲಿರುವ ಮಳಖೇಡದ ಕೋಟೆ ೩ ಸುತ್ತಿನ ಕೋಟೆಯಾಗಿದ್ದು ಹೊರಕೋಟೆಯು ಒಳಕೋಟೆಯನ್ನು ಸಂಪೂರ್ಣವಾಗಿ ಸುತ್ತುವರೆದಿಲ್ಲ. ಕಾಗಿನಾ ನದಿಯೇ ಪ್ರಾಕೃತಿಕವಾಗಿ ಕೋಟೆಯ ದಕ್ಷಿಣದಿಂದ ಪಶ್ಚಿಮವಾಗಿ ಹರಿಯುವುದರಿಂದ ಆ ಜಾಗದಲ್ಲಿ ಮತ್ತೆ ಕಂದಕದ ಅವಶ್ಯಕತೆಯಿಲ್ಲ. ಉತ್ತರದಿಂದ ಪೂರ್ವಕ್ಕೆ ಮಾತ್ರ ಕಂದಕವನ್ನು ನಿರ್ಮಿಸಲಾಗಿದೆ. ಹೊರಕೋಟೆಯನ್ನು ದಪ್ಪನಾದ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ನಿರ್ಮಿಸಲಾಗಿದೆ. ಇದಕ್ಕೆ ಪ್ರಮುಖ ದ್ವಾರವಾಗಿ ಪೂರ್ವ ಮತ್ತು ಈಶಾನ್ಯಕ್ಕೆ ದ್ವಾರಗಳಿವೆ. ಪೂರ್ವದಿಕ್ಕಿನ ಬಾಗಿಲು ಇಂದಿಗೆ ಬಿದ್ದು ಹಾಳಾಗಿದೆ. ಇದಕ್ಕೆ ಉತ್ತರದಲ್ಲಿ ಅರ್ಧವೃತ್ತಾಕಾರದ ದೊಡ್ಡ ಕೊತ್ತಳವಿದೆ. ದಕ್ಷಿಣಕ್ಕೆ ಒಂದರ ನಂತರ ಇನ್ನೊಂದು ಎರಡು ಗೋಡೆಯನ್ನು ನಿರ್ಮಿಸಿಲಾಗಿದೆ. ಹೊರಕೋಟೆಯಲ್ಲಿ ಅರ್ಧವೃತ್ತಾಕಾರ ಹಾಗೂ ಚೌಕಾಕಾರದ ಎರಡೂ ರೀತಿಯ ಕೊತ್ತಳಗಳಿವೆ.
ಒಳಕೋಟೆಯನ್ನು ಚಿಕ್ಕ ಚಿಕ್ಕ ಕಲ್ಲುಗಳನ್ನು ಕತ್ತರಿಸಿ ನಯಮಾಡಿ ಕಟ್ಟಲಾಗಿದೆ. ಸುಮಾರು ೬ ಮೀ. ಎತ್ತರವಿರುವ ಈ ಕೋಟೆ ಗೋಡೆಯು ಇಂದಿಗೆ ಅಲ್ಲಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ಕೋಟೆಯ ಮಹಾದ್ವಾರವು ಪೂರ್ವ ದಿಕ್ಕಿನಲ್ಲಿದೆ. ಕೋಟೆಯಲ್ಲಿ ಅರ್ಧ ವೃತ್ತಾಕಾರದ ಹಾಗೂ ಚೌಕಾಕಾರದ ಬುರುಜುಗಳಿವೆ. ಇವುಗಳಲ್ಲಿ ಅತ್ಯಂತ ವಿಶಿಷ್ಟವಾದ ಕರ್ನಾಟಕದ ಯಾವ ಕೋಟೆಯಲ್ಲೂ ಇರದ ಒಂದು ರೀತಿಯ ಬುರುಜಿದೆ. ಅದೆಂದರೆ ಪಶ್ಚಿಮ ದಿಕ್ಕಿನಲ್ಲಿ ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು ಮೇಲೆ ಮೇಲೆ ಬರುತ್ತ ಅದು ಅರ್ಧವೃತ್ತಾಕಾರವಾಗಿ ರೂಪುಗೊಂಡಿದೆ. ಕೋಟೆಯ ಮೇಲ್ಭಾಗದಲ್ಲಿ ಗಾರೆಯಿಂದ ಮಾಡಿದ ಬಂದೂಕು ಕಿಂಡಿಗಳಿವೆ.
ಇದರ ಮಹಾದ್ವಾರದ ಒಳಗೆ ೩ ಬಾಗಿಲುಗಳಿವೆ. ಮೊದಲನೆಯ ಮುಖ್ಯದ್ವಾರವು ಉತ್ತರಾಭಿಮುಖವಾಗಿದೆ. ಈ ಬಾಗಿಲು ಎರಡು ವೃತ್ತಾಕಾರದ ಕೊತ್ತಳಗಳ ನಡುವೆ ನಿರ್ಮಾಣ ಗೊಂಡಿದೆ. ಮುಖ್ಯ ಬಾಗಿಲು ಕಮಾನಿನ ಆಕಾರದಲ್ಲಿದ್ದು ಪಕ್ಕದಲ್ಲಿ ಒಂದು ಚಿಕ್ಕ ಬಾಗಿಲಿದೆ. ಈ ಆವರಣವನ್ನು ದಾಟಿ ಮುನ್ನಡೆದರೆ ಪಶ್ಚಿಮಕ್ಕೆ ಎರಡನೆಯ ಬಾಗಿಲು ಸಿಗುತ್ತದೆ. ಇದೂ ಸಹ ಕಮಾನಿನ ಆಕಾರದಲ್ಲಿದೆ. ಬಾಗಿಲಿನ ಉತ್ತರ ಭಾಗಕ್ಕೆ ಅಷ್ಟಭುಜಾಕೃತಿಯ ಕೊತ್ತಳವಿದೆ. ದಕ್ಷಿಣಕ್ಕೆ ಕೋಟೆ ಗೋಡೆಯಿದೆ. ಇಲ್ಲಿಯೇ ಒಳಭಾಗದಲ್ಲಿ ಕೋಟೆಯನ್ನು ಹತ್ತಲು ಮೆಟ್ಟಿಲುಗಳಿವೆ.

ಬೇಲೂರು ಹಳೇಬೀಡಿನ ಕೋಟೆ

belurfort3ಹೊಯ್ಸಳರ ಕೋಟೆಗಳಲ್ಲಿ ಉಳಿದಿರುವ, ಹೇಳಿಕೊಳ್ಳಬಹುದಾದ ಕೋಟೆಯೆಂದರೆ ರಾಜಧಾನಿ ಹಳೇಬೀಡಿನ ಕೋಟೆ. ಇದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಹಳೇಬೀಡು ಎಂದು ಕರೆಯುವ ಇಂದಿನ ಊರು ಮಾತ್ರವಲ್ಲದೇ ಸುತ್ತಮುತ್ತಲ ಅನೇಕ ಗ್ರಾಮಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ವಿಸ್ತಾರವಾದ ಕೋಟೆಯೆಂದರೆ ಹಳೇಬೀಡು ಕೋಟೆ. ಹೊಯ್ಸಳರು ಅತ್ಯಂತ ಸುಭದ್ರವಾಗಿ ಕಟ್ಟಿದ್ದ ಕೋಟೆ ಸೂಕ್ತ ಸಂರಕ್ಷಣೆಯಿಲ್ಲದೆ ಸಂಪೂರ್ಣ ಹಾಳಾಗಿದ್ದು ಕೇವಲ ಅಲ್ಲಲ್ಲಿ ತನ್ನ ಅವಶೇಷವನ್ನು ಇಂದಿನ ಜನರಿಗೆ ತೋರಿಸುತ್ತದೆ.
ಹಳೇಬೀಡಿನ ಕೋಟೆಯನ್ನು ಅತ್ಯಂತ ವಿಶೇಷವಾಗಿ ಸಂಯೋಜಿಸಲಾಗಿದೆ. ವಿಶಾಲವಾದ ದೋರಸಮುದ್ರ ಕೆರೆಯ, ಬಿದರ ಕೆರೆಯ, ಕಟ್ಟೆಸೋಮನಹಳ್ಳಿ ಕೆರೆಯ ದಂಡೆಗಳೇ ಇದಕ್ಕೆ ಕೋಟೆಗೊಡೆಯ ಎಲ್ಲೆಗಳು. ಸೂಕ್ತ ರಕ್ಷಣೆಗಾಗಿ ಇರುವ ಬೆಣ್ಣೆಗುಡ್ಡ ಎಂಬ ಎರಡು ಗುಡ್ಡಗಳು ಕೋಟೆಯ ಭದ್ರತೆಯ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ. ಕೋಟೆಯ ಒಳಗೆ ಇರುವ ತಿಪ್ಪನಹಳ್ಳಿ ಕೆರೆಯು ಇವುಗಳೊಂದಿಗೆ ಆಂತರಿಕ ಅಗತ್ಯವನ್ನು ಪೂರೈಸುವುದಾಗಿತ್ತು.
ಈ ಕೋಟೆಗೆ ಮುಖ್ಯವಾದ ದ್ವಾರ ಪೂರ್ವದಿಕ್ಕಿನಲ್ಲಿದ್ದು ಉಳಿದಂತೆ, ದೋರಸಮುದ್ರ ಕೆರೆಗೂ, ಬೆಣ್ಣೆಗುಡ್ಡಕ್ಕೂ ನಡುವೆ ದಕ್ಷಿಣದ ಬಾಗಿಲು, ಕಟ್ಟೆ ಸೋಮನಹಳ್ಳಿ ಕೆರೆಗೆ ಹೋಗುವ ನೈರುತ್ಯದ ಬಾಗಿಲು, ಇದೇ ಕೆರೆಯ ದಂಡೆಯಲ್ಲಿರುವ ಪಶ್ಚಿಮದ ಬಾಗಿಲುಗಳು ಮಾತ್ರವಿದ್ದವು. ದೊಡ್ಡ ದೊಡ್ಡದಾದ ಕಲ್ಲುಗಳನ್ನು ಜೋಡಿಸಿ ನಿರ್ಮಾಣ ಮಾಡಿರುವ ಈ ಕೋಟೆಯ ಗೋಡೆಯು ಇಂದಿಗೆ ಸಂಪೂರ್ಣ ಗಿಡ-ಗಂಟೆಗಳಿಂದ ತುಂಬಿಹೋಗಿದೆ. ದೊಡ್ಡ ಗಾತ್ರದ ಕಲ್ಲಿನಿಂದ ಕೋಟೆ ಗೋಡೆಯನ್ನು ಕಟ್ಟಿ ಒಳಭಾಗವನ್ನು ಮಣ್ಣಿನಲ್ಲಿ ತುಂಬಲಾಗಿದೆ. ಕೋಟೆಯ ಸುತ್ತ ಕಂದಕವಿದ್ದು ಸುಮಾರು ಪ್ರತೀ ನೂರು ಮೀಟರಿಗೆ ಒಂದರಂತೆ ಚೌಕಾಕಾರದ ಕೊತ್ತಳಗಳನ್ನು ನಿರ್ಮಿಸಲಾಗಿದೆ.
ಬೆಣ್ಣೆಗುಡ್ಡಕ್ಕೆ ಹೊಂದಿಕೊಂಡಂತೆ ಅರಮನೆ ಪ್ರದೇಶವಿದ್ದು ಇದರ ಸುತ್ತಲೂ ಕಲ್ಲಿನಲ್ಲಿ ನಿರ್ಮಿತವಾದ ಒಳಕೋಟೆಯೊಂದಿದೆ. ಈ ಒಳಕೋಟೆಯು ಆಯತಾಕಾರವಾಗಿದ್ದು ಎತ್ತರ ಕೆಲವೆಡೆ ೩ ಮೀ.ಇದೆ. ಕರಿಕಲ್ಲುಗಳಿಂದ ಈ ಕೋಟೆಯನ್ನು ನಿರ್ಮಿಸಲಾಗಿದೆ, ಆದರೆ ಎಲ್ಲಿಯೂ ಗಾರೆಯನ್ನು ಉಪಯೋಗಿಸಿಲ್ಲ. ಹಳೇಬೀಡು ಹೊರಕೋಟೆಯ ಒಂದು ವಿಶಿಷ್ಟತೆಯೆಂದರೆ ಕೋಟೆ ದ್ವಾರಗಳು. ವೈರಿಗಳಿಗೆ ಕೋಟೆ ಕೊತ್ತಳಗಳಂತೆ ತೋರುವ ಭಾಗಗಳ ಪಕ್ಕದಲ್ಲಿ ಪ್ರವೇಶ ದ್ವಾರಗಳಿದ್ದು ಕೊತ್ತಳ ಹಾಗೂ ಬಾಗಿಲುಗಳಿಗೆ ವ್ಯತ್ಯಾಸ ಗೊತ್ತಾಗದ ಹಾಗೆ ರಚಿತವಾಗಿದೆ. ಪ್ರವೇಶವು ಅಂಕುಡೊಂಕಾಗಿರುವುದರಿಂದ ವೈರಿಗಳ ದಾಳಿಗೆ ಕಷ್ಟಕರವಾಗಿದೆ.

ಬೇಗೂರಿನ ಕೋಟೆ

begur1ಕರ್ನಾಟಕವನ್ನು ಅತ್ಯಂತ ದೀರ್ಘವಾಗಿ ಆಳಿದ ಅರಸು ಮನೆತನ ಗಂಗರದ್ದು. ನಾಲ್ಕನೆಯ ಶತಮಾನದ ಮಧ್ಯಭಾಗದಿಂದ ಹತ್ತನೆಯ ಶತಮಾನದ ಅಂತ್ಯದವರೆಗೆ ತಲಕಾಡು, ಕೋಲಾರ, ನಂದಿಗಳಲ್ಲಿ ನೆಲೆನಿಂತು ಗಂಗವಾಡಿ ಎಂಬ ವಿಸ್ತಾರವಾದ ಭೂಭಾಗವನ್ನು ಆಳಿದರು. ಕೆಲವೊಮ್ಮೆ ಚಕ್ರವರ್ತಿಗಳಾಗಿ ಕೆಲವೊಮ್ಮೆ ಅಧೀನ ಅರಸರಾಗಿ ಇವರು ಆಳ್ವಿಕೆ ನಡೆಸಿದರು. ದಕ್ಷಿಣದಲ್ಲಿ ರಾಮೇಶ್ವರದವರೆಗೂ ಉತ್ತರದಲ್ಲಿ ಉಜ್ಜಯಿನಿಯವರೆಗೂ ಇವರ ಆಳ್ವಿಕೆ ಇದ್ದುದರಿಂದ ಇವರಿಗೆ ಶತ್ರುಗಳು ಜಾಸ್ತಿಯಿದ್ದರು. ಇವರ ಕಾಲದ ಪ್ರಮುಖ ರಚನೆಗಳೆಲ್ಲ ಕನ್ನಡ ನಾಡಿನಲ್ಲಿಯೇ ಇವೆ. ಗಂಗರ ಆರಂಭಕಾಲದ ಯಾವ ರಚನೆಗಳೂ ಉಳಿದು ಬಂದಿಲ್ಲವಾದರೂ ಕ್ರಿ.ಶ.9 ಹಾಗೂ 10 ನೆಯ ಶತಮಾನದ ದೇಗುಲಗಳು ಉಳಿದು ಬಂದಿವೆ. ಗಂಗರ ಕಾಲದ ಕೋಟೆಗಳಲ್ಲಿ ಉಳಿದುಬಂದಿರುವ ಕೋಟೆಯೆಂದರೆ ಬೇಗೂರಿನ ಮಣ್ಣಿನ ಕೋಟೆ.
ಈ ಕೋಟೆಗೆ ಪೂರ್ವದಿಕ್ಕಿನಲ್ಲಿ ಅಗಸೆ ಬಾಗಿಲಿದೆ. ಈ ಅಗಸೆ ಬಾಗಿಲಿನಲ್ಲಿ ಕಲ್ಲಿನ ಮಂಟಪವಿದ್ದು ಭದ್ರವಾದ ಬಾಗಿಲು ಇದ್ದ ಸೂಚನೆಯಿದೆ. ಒಟ್ಟು ೧೬ ಕಂಬಗಳ ಈ ಮಂಟಪದ ಮಧ್ಯದಲ್ಲಿ ದಾರಿಯಿದ್ದು ಮಿಕ್ಕ ಭಾಗವು ಎತ್ತರಿಸಿದ ಕಟಾಂಜನವಾಗಿದೆ. ಈ ಅಗಸೆ ಬಾಗಿಲಿನ ಎಡ ಹಾಗೂ ಬಲಬದಿಗೆ ಎರಡು ಮಣ್ಣಿನ ಕೊತ್ತಳಗಳಿವೆ. ವೃತ್ತಾಕಾರವಾದ ಬೇಗೂರಿನ ಕೋಟೆಗೆ ಇಂತಹುದೇ ಆದ ಒಟ್ಟು ೧೨ ಕೊತ್ತಳಗಳಿವೆ. ಈ ಕೋಟೆಯ ವಿಸ್ತಾರ ೩ ಎಕರೆ ೩೨ ಗುಂಟೆಗಳು. ಕೋಟೆಯ ಸುತ್ತಲೂ ಸುಮಾರು ೧೫ ಅಡಿ ಅಗಲ ಮತ್ತು ೧೦ ಅಡಿ ಆಳವಿರುವ ಕಂದಕವಿದ್ದು ಇಂದಿಗೆ ಬಹುತೇಕ ಹಾಳಾಗಿದೆ. ಈ ಅಗಸೆ ಬಾಗಿಲಿನ ಕಂಬಗಳ ಮೇಲೆ ನಂತರದ ಕಾಲದಲ್ಲಿ ಗರುಡನೊಂದು ಕಡೆ ಆಂಜನೇಯನೊಂದು ಕಡೆ ಕೆತ್ತಲಾಗಿದೆ. ಈ ಕೋಟೆಯ ಪ್ರಾಚೀನತೆಯ ಬಗ್ಗೆ ಬೆಳಕು ಚೆಲ್ಲುವ ನಾಗತ್ತರನ ಮಗಳ ಶಾಸನವಿದೆ.
ನಾಗತ್ತರನು ಗಂಗರ ಕಾಲದ ಅವಿಸ್ಮರಣೀಯ ವ್ಯಕ್ತಿಯಾಗಿದ್ದಾನೆ. ೯೨೦ ರ ಸುಮಾರಿನಲ್ಲಿ ನಡೆದ ಪ್ರಸಿದ್ಧ ಬೇಗೂರಿನ ಕಾಳಗದಲ್ಲಿ ಗಂಗರ ಪರವಾಗಿ ನಿಂತು ಹೋರಾಡಿದ ಅಪ್ರತಿಮ ವೀರನೀತ. ಈ ಹೋರಾಟದಲ್ಲಿಯೇ ನಾಗತ್ತರ ಮಡಿಯುತ್ತಾನೆ. (ನಾಗತ್ತರ ಬೇಗೂರಿನ ಪ್ರಾಂತ್ಯಾಧಿಕಾರಿ ಆಗಿದ್ದನು). ಈತನ ಮಗಳ ಬಗ್ಗೆ ಬೇಗೂರಿನ ಕೋಟೆಯ ದ್ವಾರದ ಶಾಸನ ತಿಳಿಸುತ್ತದೆ. ಬೇಗೂರು ಕೋಟೆಯು ನೆಲಮಟ್ಟದಿಂದ ಸುಮಾರು ೨೦ ಅಡಿಯವರೆಗೂ ಎತ್ತರವಿರುವುದು. ಸುಮಾರು ೧೦ ಅಡಿ ಅಗಲವಾಗಿರುವುದು. ಆಳವಾದ ಕಂದಕವು ಸುತ್ತಲೂ ಇರುವುದರಿಂದ ಈ ಕೋಟೆಯನ್ನು ವಶಪಡಿಸಿಕೊಳ್ಳಲು ಕಷ್ಟವೇ ಆಗಿತ್ತು.
ಬಾದಾಮಿ ಕೋಟೆ
baddamiFort1ಬಾದಮಿಯ ಬೆಟ್ಟದ ಮೇಲೆ ಸುಭದ್ರವಾದ ಕೋಟೆಯನ್ನು ಮೊದಲು ಕಟ್ಟಿಸಿದವನು ಒಂದನೆಯ ಪುಲಿಕೇಶಿ. ಇದರ ಕಾಲ ಕ್ರಿ.ಶ. 543. ಬಾದಾಮಿಯಲ್ಲಿ ನೈಸರ್ಗಿಕವಾಗಿರುವ ಎರಡು ದೊಡ್ಡ ಬೆಟ್ಟಗಳು ಹಾಗೂ ಅದರ ನಡುವೆ ಇರುವ ಊರಿನಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ. ನಂತರದ ಕೋಟೆಯ ರಚನೆಯೆಲ್ಲವೂ ೧೮ನೆಯ ಶತಮಾನದ್ದು. ಉತ್ತರ ದಿಕ್ಕಿನ ಕೋಟೆಯನ್ನು ಬಾವನ್ ಬಂಡೆ ಕೋಟೆಯೆಂದು ಕರೆಯುವುದು ವಾಡಿಕೆ.
ಉತ್ತರ ಬೆಟ್ಟದಲ್ಲಿರುವ ಕೋಟೆಯೇ ಕ್ರಿ.ಶ. ೫೪೩ರಲ್ಲಿ ಒಂದನೆಯ ಪುಲಿಕೇಶಿಯಿಂದ ನಿರ್ಮಾಣವಾದದ್ದು. ಈ ಕೋಟೆಯ ರಚನೆಗೆ ಉದ್ದುದ್ದವಾದ ಕಲ್ಲುಗಳನ್ನು ಬಳಸಲಾಗಿದೆ. ಚೌಕಾಕಾರದಲ್ಲಿರುವ ಕೊತ್ತಳಗಳು ಸದೃಢವಾಗಿವೆ. ಕೋಟೆಯನ್ನು ಪ್ರವೇಶಿಸುವ ಮೊದಲನೆಯ ಬಾಗಿಲು ನಂತರದ ಕಾಲದಲ್ಲಿ ಜೀರ್ಣೋದ್ಧಾರಗೊಂಡರೂ ಮೂಲ ಅಂಶಗಳನ್ನು ಒಳಗೊಂಡಿದೆ. ಈ ಬಾಗಿಲು ಪೂರ್ವಾಭಿಮುಖವಾಗಿದೆ. ಈ ಬಾಗಿಲು ದೊಡ್ಡ ಬಂಡೆಯೊಂದರ ಪಕ್ಕದಲ್ಲಿದೆ. ಬಾಗಿಲು ಬಿಟ್ಟು ನಂತರ ಕೋಟೆ ಗೋಡೆಗಳನ್ನು ಮುಂದುವರೆಸಲಾಗಿದೆ. ಎರಡನೆಯ ಬಾಗಿಲು ಪಶ್ಚಿಮಾಭಿಮುಖವಾಗಿದ್ದಾರೆ ಮತ್ತು ಮೂರನೆಯ ಬಾಗಿಲು ಪೂರ್ವದಲ್ಲಿಯೇ ಇದೆ. ಇದನ್ನು ಸಹ ಎರಡು ಬಂಡೆಗಳ ನಡುವೆ ಇರುವ ಜಾಗದಲ್ಲಿಯೇ ಕಟ್ಟಲಾಗಿದೆ. ಮೇಲೆ ಬಂಡೆಯೊಂದರ ಮೇಲೆ ಕಾವಲು ಗೋಪುರಗಳನ್ನು ನಿರ್ಮಿಸಲಾಗಿದೆ. ಈ ಕಾವಲು ಗೋಪುರವನ್ನು ಏರಬೇಕಾದರೆ ಎರಡು ಅಂತಸ್ತು ಮೆಟ್ಟಿಲುಗಳನ್ನು ಏರಬೇಕು. ಇಲ್ಲಿಂದ ಮುಂದೆ ೪ನೆಯ ಬಾಗಿಲಿದೆ. ಇದು ಬಾದಾಮಿ ಚಾಲುಕ್ಯರ ಶೈವ ದ್ವಾರಪಾಲಕರನ್ನು ಹೊಂದಿದೆ. ಇದನ್ನು ೧೮ನೆಯ ಶತಮಾನದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಆಯತಾಕಾರದ ಕಣಜ, ಕೆಳಗಿನ ಶಿವಾಲಯಗಳು ಇದರ ಬಳಿಯೇ ಇರುವುದು. ಇಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ಕಟ್ಟಲಾದ ವರ್ತುಲಾಕಾರದ ದೊಡ್ಡ ಕೊತ್ತಳವಿದೆ. ಇಲ್ಲಿ ಒಂದು ಚಿಕ್ಕ ತೋಪಿದೆ. ಇದನ್ನು ಝಂಡಾ ಬತೇರಿ ಎನ್ನುತ್ತಾರೆ. ಇದರ ಪಕ್ಕದಲ್ಲಿ ಮದ್ದಿನ ಮನೆಯಿದೆ. ಮುಂದೆ ಸಿಗುವುದೇ ೫ನೆಯ ಬಾಗಿಲು, ಅದನ್ನು ದಾಟಿದರೆ ಸಿಗುವುದೇ ಬೆಟ್ಟದ ತುದಿಯ ಬಯಲು.
ಇಲ್ಲಿ ಬಾದಾಮಿ ಚಾಲುಕ್ಯರ ಮೇಲಣ ಶಿವಾಲಯವಿದೆ. ಇದನ್ನು ಬಿಟ್ಟು ಉಳಿದೆಲ್ಲಾ ರಚನೆಗಳು ೧೮ನೆಯ ಶತಮಾನದ್ದು. ವಿಶಾಲವಾದ ಅರಮನೆಯಿದೆ. ಇಲ್ಲಿ ಟಿಪ್ಪುಸುಲ್ತಾನನ ಖಜಾನೆಯಿದೆ. ಈಶಾನ್ಯಕ್ಕೆ ಕೆಳಗಿಳಿಯಲು ಮೆಟ್ಟಿಲುಗಳಿವೆ. ವಿಜಯನಗರ ಕಾಲದಲ್ಲಿ ಕಟ್ಟಲಾದ ಇನ್ನೊಂದು ಕೋಟೆ ಬಾದಮಿಯಲ್ಲಿದೆ. ಈ ಕೋಟೆಯನ್ನು ಕಟ್ಟಲು ವಿಜಯನಗರದ ಎಂದಿನ ರಚನಾಶೈಲಿಯಾದ ಬೃಹತ್ ಕಲ್ಲುಗಳನ್ನು ಕತ್ತರಿಸಿ ಮಾಡಲಾಗಿದೆ. ವಿಶ್ವ ಪ್ರಸಿದ್ಧವಾದ ಮೇಣದ ಬಸದಿಗಳಿರುವ ದಕ್ಷಿಣ ಬೆಟ್ಟವನ್ನು ಕಡೆದು ಮೇಲಕ್ಕೆ ಮೆಟ್ಟಿಲುಗಳನ್ನು ಮಾಡಿ ಮೇಲುಗಡೆ ಕೋಟೆಯೊಂದನ್ನು ನಿರ್ಮಿಸಲಾಗಿದೆ. ಈ ಕೋಟೆಯನ್ನು ರಣಮಂಡಲ ಕೋಟೆ ಎಂದು ಕರೆಯುತ್ತಾರೆ. ದಕ್ಷಿಣ ಬೆಟ್ಟದ ತುದಿಯಲ್ಲಿ ಕಟ್ಟಲಾಗಿರುವ ಕೋಟೆ ಕೂಡ ೧೯ನೆಯ ಶತಮಾನದ್ದು. ಬೆಟ್ಟದ ಬಂಡೆಗಳ ನಡುವೆ ಇರುವ ಜಾಗಗಳನ್ನೂ ಸಹ ಕೋಟೆಯ ಗೋಡೆಯಂತೆ ಉಪಯೋಗಿಸಿಕೊಳ್ಳಲಾಗಿದೆ. ಚಿಕ್ಕ ಚಿಕ್ಕ ಕಲ್ಲುಗಳನ್ನು ಬಳಸಿ ಕಟ್ಟಿರುವ ಈ ಕೋಟೆಯಲ್ಲಿ ಗಾರೆಯನ್ನು ಸಹ ಬಳಸಲಾಗಿದೆ. ಇದರ ಕೊತ್ತಳಗಳೆಲ್ಲ ವರ್ತುಲಾಕಾರದಲ್ಲಿವೆ. ಇದರಲ್ಲಿ ಒಂದು ಕೊತ್ತಳದ ಮೇಲೆ ಒಂದು ತೋಪು ಕೂಡ ಇದೆ. ಈ ರಣಮಂಡಲ ಕೋಟೆ ಹಾಗೂ ಬಾವನ್ ಬಂಡೆ ಕೋಟೆಗಳ ನಡುವೆ ೩೦೦ ಗಜಗಳ ಅಂತರವಿದ್ದು ಇದರಲ್ಲಿಯೇ ಬಾದಾಮಿ ಊರು ಅಂತರ್ಗತವಾಗಿದೆ.

ಹಾನಗಲ್ ಕೋಟೆ

Hangal_Tarakeshwara_temple
ಕರ್ನಾಟಕದ ಅತ್ಯಂತ ದೊಡ್ಡ ಮಣ್ಣಿನ ಕೋಟೆ ಎಂದು ಹೆಸರಾಗಿರುವ ಹಾನಗಲ್ ಕೋಟೆ ನಾಲ್ಕು ಸುತ್ತಿನ ಮಣ್ಣಿನ ಕೋಟೆ. ಇಡೀ ಹಾನಗಲ್ ಊರನ್ನು ಆವರಿಸಿಕೊಂಡಿರುವ ಮೊದಲ ಹಂತದ ಕೋಟೆಯು ಅತ್ಯಂತ ವಿಶಾಲವಾಗಿದೆ. ವರದಾ ನದಿಯ ಉಪನದಿಯಾದ ಧರ್ಮಾನದಿಯ ದಂಡೆಯ ಆಗ್ನೇಯದಲ್ಲಿರುವ ಈ ಕೋಟೆ ಇನ್ನುಳಿದ ಎಲ್ಲೆಗಳಲ್ಲಿ ಈಶಾನ್ಯಕ್ಕೆ ಅಚಕೆರೆ, ವಾಯುವ್ಯಕ್ಕೆ ಕಂಬಳಕೆರೆ, ನೈರುತ್ಯಕ್ಕೆ ಆನೆಕೆರೆಗಳಿರುವಂತಹ ವಿಶೇಷ ತಾಂತ್ರಿಕತೆಯಲ್ಲಿ ಹಾನಗಲ್ ಕೋಟೆಯಿದೆ. ಈ ಹೊರಕೋಟೆಯ ಎತ್ತರ ಗೋಡೆಯು ತಳದಲ್ಲಿ ೧೦ ಮೀಟರ್ ನಷ್ಟು ಚಿಕ್ಕದಾಗುತ್ತಾ ಸಾಗುತ್ತದೆ. ದಕ್ಷಿಣದಿಂದ ಉತ್ತರಕ್ಕೆ ಈ ಕೋಟೆಯ ಉದ್ದ ೨೧೦೦ ಮೀಟರ್ ಉತ್ತರ-ಪಶ್ಚಿಮಕ್ಕೆ ೨೫೦೦ ಮೀಟರ್ ಇದೆ. ಸುತ್ತಲೂ ಕೆಲವು ಕೊತ್ತಳಗಳಿವೆ. ಪಶ್ಚಿಮ ದಿಕ್ಕಿಗೆ ಒಂದು ಬಾಗಿಲು, ದಕ್ಷಿಣ ದಿಕ್ಕಿನಲ್ಲೊಂದು ದಿಡ್ಡಿ ಬಾಗಿಲು, ಈಶಾನ್ಯ ದಿಕ್ಕಿನಲ್ಲಿ ವೃತ್ತಾಕಾರದ ಕೊತ್ತಳಗಳ ನಡುವೆ ಒಂದು ಬಾಗಿಲಿದ್ದು ಹಾಗೂ ವಾಯುವ್ಯದಲ್ಲೊಂದು ದಿಡ್ಡಿ ಬಾಗಿಲಿದೆ.
ಎರಡನೆಯ ಸುತ್ತಿನ ಕೋಟೆಯು ಮೊದಲನೆಯ ಸುತ್ತಿನ ಹೊರಕೋಟೆಯಿಂದ ೪೦೦ ಮೀಟರು ದೂರದಲ್ಲಿದೆ. ದಕ್ಷಿಣ-ಉತ್ತರಕ್ಕೆ ೧೨೦೦ ಮೀ. ಉತ್ತರ-ಪಶ್ಚಿಮವಾಗಿ ೧೩೦೦ ಮೀಟರ್ ಇದೆ. ಈ ೬ ಸುತ್ತಿನಲ್ಲಿಯೇ ಅತ್ಯಂತ ಪ್ರಸಿದ್ಧವಾದ ತಾರಕೇಶ್ವರ ದೇವಾಲಯವಿರುವುದು. ಜಂಬಿಟ್ಟಿಗೆಯನ್ನು ಬಳಿಸಿ ಇದರ ಮೇಲೆ ಮಣ್ಣಿನಿಂದ ಕಟ್ಟಿರುವ ಕೋಟೆ ಗೋಡೆ ಇದು. ಈ ಕೋಟೆಯ ಎತ್ತರ ೧೦ ಮೀ.ಅಗಲ ೧೫ ಮೀ. ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯ ಪಶ್ಚಿಮಕ್ಕೆ ಹಾನಗಲ್ಲು ಗ್ರಾಮವಿದ್ದು ಈಶಾನ್ಯಕ್ಕೆ ಶಾಸ್ತ್ರಿ ಕೆರೆಯಿದೆ.
ಮೂರನೆಯ ಸುತ್ತಿನ ಕೋಟೆಯು ಜಂಬಿಟ್ಟಿಗೆಗಳನ್ನು ಸೇರಿಸಿ ಅದರ ಮೇಲೆ ಮಣ್ಣಿನ ಗೋಡೆಯನ್ನು ಕಟ್ಟಿರುವುದಾಗಿದೆ. ಕೋಟೆಯ ಎತ್ತರ ೨೦ ಮೀ. ಅಗಲ ೨೦ ಮೀ. ವಾಯುವ್ಯದಲ್ಲಿ ಬಾಗಿಲಿದೆ. ಪಶ್ಚಿಮ ಮತ್ತು ಪೂರ್ವಗಳಲ್ಲಿಯೂ ದ್ವಾರಗಳಿವೆ. ಇಲ್ಲಿನ ಕಂದಕಕ್ಕೆ ಆನೆಕೆರೆ ಮತ್ತು ಶಾಸ್ತ್ರಿಕೆರೆಯಿಂದ ನೀರು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಶಾತವಾಹನರ ಕಾಲದ ಅನೇಕ ಅವಶೇಷಗಳು ಸಿಕ್ಕಿವೆ. ಕೆಲವು ಸ್ಮಾರಕಗಳ ಪಳೆಯಳಿಕೆಗಳು ಕಂಡುಬರುತ್ತವೆ. ಇಟ್ಟಿಗೆಯಿಂದ ಕಟ್ಟಿದ ವೃತ್ತಾಕಾರದ ಬಾವಿ ಅತ್ಯಂತ ಹಳೆಯದು.
ಮೂರು ಸುತ್ತಿನ ಕೋಟೆಯನ್ನು ದಾಟಿದರೆ ಸಿಗುವ ನಾಲ್ಕನೆಯ ಸುತ್ತಿನ ಕೋಟೆಯು ಈ ಕೋಟೆಯ ಆತ್ಮವಾಗಿದೆ. ಇದು ಈ ಕೋಟೆ ಸಮುಚ್ಚಯದಲ್ಲಿಯೇ ಎತ್ತರವಾದ ಕೋಟೆ. ೨೫ ಮೀ. ಎತ್ತರ ಹಾಗೂ ೨೦ ಮೀ. ಅಗಲವಿರುವ ಈ ಕೋಟೆಯ ಈಶಾನ್ಯ. ಪೂರ್ವ, ನೈರುತ್ಯ, ವಾಯುವ್ಯಗಳಲ್ಲಿ ಕೊತ್ತಳಗಳಿವೆ. ಒಟ್ಟು ೧೬ ಕೊತ್ತಳಗಳಿವೆ. ಇದು ವೃತ್ತಾಕಾರವಾಗಿದೆ. ಇಲ್ಲೊಂದು ಮೂಲತಃ ಜೈನದೇವಾಲಯವಾಗಿದ್ದು ನಂತರ ಶೈವದೇವಾಲಯವಾಗಿರುವ ೧೨ನೇ ಶತಮಾನದ ದೇವಾಲಯವಿದೆ.