ಕರ್ನಾಟಕದ ರಾಜಮನೆತನಗಳು

ಕೆಳದಿ ರಾಜವಂಶ

ಕೆಳದಿ ರಾಜವಂಶಸಮಸ್ತ ಉತ್ತರ ಭಾರತವನ್ನು ತನ್ನ ತೆಕ್ಕೆಗೆ ತಗೆದುಕೊಂಡು, ಜಗತ್ತನ್ನು ಗೆದ್ದವನು  ಅರ್ಥಾತ್  “ಅಲಂಗಿರ್ ” ಎಂಬ ಬಿರುದನ್ನು ತಾನೆ ದಯಪಾಲಿಸಿಕೊಂಡು, ರಾಜ್ಯದಾಹದ ಆಸೆ ಈಡೇರಿಸಿಕೊಳ್ಳುವ ಸಲುವಾಗಿ ಶಿವಾಜಿ ಮಗನಾದ ರಾಜಾರಾಮನಿಗೆ ಆಶ್ರಯ ಕೊಟ್ಟರೆಂಬ  ಕಾರಣಕ್ಕೆ  ತನ್ನ ಬಲಿಷ್ಠ ಸೇನೆಯನ್ನು ಮುನ್ನುಗ್ಗಿಸಿ  ಕನ್ನಡದ ಮಲೆನಾಡಿನ ಚಿಕ್ಕ ಸಂಸ್ಥಾನದ ಮೇಲೆ ಯುದ್ದ ಸಾರಿದನು  ” ಔರಂಗಜೇಬ್ “. ಆದರೂ ಕನ್ನಡದ ಕೆಚ್ಚಿನ ಕಲಿಗಳು ಅವನನ್ನು ತಡೆಯುವಲ್ಲಿ ಯಶಸ್ವಿಯಾಗಿ ಕಡೆಗೆ ಮೊಗಲರ ಸೈನ್ಯ ಸಂಧಾನ ಮಾಡಿಕೊಂಡು ಹಿಂತಿರುಗಿತು. ಆ ಚಿಕ್ಕ ಸಂಸ್ಥಾನ ಯಾವುದು ಗೊತ್ತೇ, ಯುದ್ದದಲ್ಲಿ ಮುನ್ನೆಡಿಸಿ ಮೊಗಲರಿಗೆ ಸೋಲಿನ ರುಚಿ ತೋರಿಸಿದ ಕನ್ನಡ ರತ್ನ ಯಾವುದು ಗೊತ್ತೇ ?
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದಾದ ಮಲೆನಾಡಿನ ಕೆಳದಿಯೇ ಆ ಸಂಸ್ಥಾನ. ಯುದ್ದದಲ್ಲಿ ಮುನ್ನೆಡಿಸಿ ೨೫ ವರ್ಷ ಶಾಂತಿ , ನ್ಯಾಯ ಮತ್ತು ನೀತಿಯಿಂದ ರಾಜ್ಯಭಾರ ಮಾಡಿ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ  ರತ್ನ ” ಚೆನ್ನಮ್ಮ”
ಕೆಳದಿ ರಾಜ ವಂಶ (೧೪೯೯-೧೭೬೩)  ಕರ್ನಾಟಕ ರಾಜ್ಯವನ್ನಾಳಿದ ಒಂದು ಪ್ರಮುಖ ರಾಜವಂಶ. ಅವರು ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಂತೆ  ಆಳ್ವಿಕೆ ಆರಂಭಿಸಿದರು. ೧೫೬೫ ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ  ದಕ್ಷಿಣ ಭಾರತದಲ್ಲಿ ಉದ್ಭವಿಸಿದ ಗೊಂದಲದ ಸಮಯದಲ್ಲಿ ಇವರು ಕರ್ನಾಟಕದ ಇತಿಹಾಸದಲ್ಲೇ ಪ್ರಮುಖ ಪಾತ್ರವಹಿಸಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಪ್ರಮುಖ ಭಾಗಗಳಲ್ಲಿ ಆಳ್ವಿಕೆ ನಡೆಸಿದರು (ಶಿವಮೊಗ್ಗ, ಕರಾವಳಿಯ ಎಲ್ಲಾ ಜಿಲ್ಲೆಗಳು, ಮಧ್ಯ ಭಾಗದ ಕೆಲವು ಜಿಲ್ಲೆಗಳು).
ಚೌಡಪ್ಪ ನಾಯಕ (೧೪೯೯–೧೫೩೦) ಕೆಳದಿಯನ್ನು ಆಳಿದ ಮೊದಲ ಮುಖ್ಯಸ್ಥ.  ಸದಾಶಿವ ನಾಯಕ (೧೫೩೦–೧೫೬೬) ವಿಜಯನಗರ ಸಾಮ್ರಾಜ್ಯದಲ್ಲಿ ಒಬ್ಬ ಪ್ರಮುಖ ಮುಖ್ಯಸ್ತನಾಗಿದ್ದು, ಕಲ್ಯಾಣಿ ಯುದ್ಧದಲ್ಲಿ ತೋರಿದ ಶೌರ್ಯತನದಿಂದಾಗಿ ಚಕ್ರವರ್ತಿ ಅಳಿಯ ರಾಮರಾಯರಿಂದ ಕೋಟೆಕೋಲಾಹಲ ಎಂಬ ಬಿರುದನ್ನು ಪಡೆದಿದ್ದರು. ಕರ್ನಾಟಕದ ಕರಾವಳಿ ಪ್ರಾಂತ್ಯಗಳು ಅವರ ನೇರ ಆಳ್ವಿಕೆಗೆ ಒಳಪಟ್ಟಿದ್ದು ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ಸ್ಥಳಾಂತರಿಸಿದರು.
ಹಿರಿಯ ವೆಂಕಟಪ್ಪ ನಾಯಕ (೧೫೮೬ –೧೬೨೯ ):  ೧೬೨೩ ರಲ್ಲಿ ಅವರ ರಾಜ್ಯವನ್ನು ಭೇಟಿ ನೀಡಿದ್ದ ಇಟಾಲಿಯನ್ ಪ್ರವಾಸಿ ಪಿಯಟ್ರೊ ಡೆಲ್ಲ ವಲ್ಲೆ, ಅವರನ್ನು ಸಮರ್ಥ ಯೋಧ ಮತ್ತು ನಿರ್ವಾಹಕರು ಎಂದು ಕರೆದಿದ್ದಾರೆ. ಇವರ ಆಳ್ವಿಕೆಯಲ್ಲಿ ರಾಜ್ಯವು ವಿಸ್ತರಿಸಿ ಕರಾವಳಿ, ಮಲ್ನಾಡು ಮತ್ತು ಪಶ್ಚಿಮ ಘಟ್ಟಗಳ ಪೂರ್ವ ಜಾಗಗಳನ್ನು ಹೊಂದಿತು. ಹಾನಗಲ್ಲಿನಲ್ಲಿ ಬಿಜಾಪುರದ ಆದಿಲ್ ಶಾಹಿಗಳನ್ನು ಸೋಲಿಸಿದ್ದರು. ಮೂಲತಃ ವೀರಶೈವರಾಗಿದ್ದರೂ ವೈಷ್ಣವರಿಗೆ ಮತ್ತು ಜೈನರಿಗೆ ದೇವಾಲಯಗಳನ್ನು ಮತ್ತು ಮುಸಲ್ಮಾನರಿಗೆ ಮಸೀದಿಯನ್ನು ಕಟ್ಟಿಸಿಕೊಟ್ಟರು.
ಶಿವಪ್ಪ ನಾಯಕ (೧೬೪೫ –೧೬೬೦) ಕೆಳದಿ ದೊರೆಗಳಲ್ಲಿ ಶ್ರೇಷ್ಟನೆಂದು ಪರಿಗಣಿಸಲಾಗಿದೆ. ಬಿಜಾಪುರದ ಸುಲ್ತಾನರು, ಪೋರ್ಚುಗೀಸರು ಮತ್ತು ಇತರ ಹತ್ತಿರದ ರಾಜರುಗಳ ವಿರುದ್ಧ  ಅವರ ಸಮರ್ಥ ಹೋರಾಟ ಮತ್ತು ವಿಜಯಗಳಿಂದ ಈಗಿನ ಕರ್ನಾಟಕದ ಬಹುತೇಕ ರಾಜ್ಯಗಳನ್ನು ಪಡೆದುಕೊಂಡಿದ್ದರು. ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು ಮತ್ತು ತೆರಿಗೆ-ಆದಾಯದ ಸಂಗ್ರಹಕ್ಕಾಗಿ ಹೊಸ ಯೋಜನೆಳನ್ನು ಅಭಿವೃದ್ಧಿ ಪಡಿಸಿ ನಂತರ ಬ್ರಿಟಿಷರು ಕೂಡ ಅವರನ್ನು ಕೊಂಡಾಡುವಂತೆ ಪ್ರಸಿದ್ಧಿ ಗಳಿಸಿದರು. ಅವರ ಪುತ್ಥಳಿ ಮತ್ತು ಅವರು ಕಟ್ಟಿಸಿದ ಅರಮನೆ, ಅವರ ಕಾಲದ ಅನೇಕ ಕಲಾಕೃತಿಗಳನ್ನು ಜನರು ಉಳಿಸಿಕೊಂಡು ಬಂದಿದ್ದು ಈಗಿನ ಕಾಲದ ಜನರು ಅವರ ಮೇಲೆ ಇಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ.
ಮರಾಠಾ ಶಿವಾಜಿ ಮತ್ತು ನಂತರದಲ್ಲಿ ಅವರ ಮಗ ಸಂಭಾಜಿ ಜೊತೆ ಗೆಳೆತನ ಬೆಳೆಸಿ ಸಿಂಹಾಸನಕ್ಕಿದ್ದ ಎಲ್ಲಾ ಪ್ರತಿಸ್ಪರ್ಧಿ ವಾರಸುದಾರರನ್ನು ಸೋಲಿಸಿದರು ಎಂದು ಹಲವಾರು ವಿದ್ವಾಂಸರು ಹೇಳಿದ್ದಾರೆ. ಕೆಳದಿಯ ಚೆನ್ನಮ್ಮನನ್ನು ಮತ್ತು ಅವರ ಶೌರ್ಯ ಕಥೆಗಳನ್ನು ಸ್ಥಳೀಯ ಜನ ನೆನೆಸಿಕೊಳ್ಳುತ್ತಾರೆ. ಕದಂಬ, ಹೊಯ್ಸಳ, ವಿಜಯನಗರ ಮತ್ತು ದ್ರಾವಿಡ ಶೈಲಿಗಳನ್ನು ಮೇಳೈಸಿ ಇಕ್ಕೇರಿ ಮತ್ತು ಕೆಳದಿಯಲ್ಲಿ ಸುಂದರ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಇಕ್ಕೇರಿಯ ಅಘೋರೇಶ್ವರ ದೇವಾಲಯ ಮತ್ತು ಕೆಳದಿಯ ರಾಮೇಶ್ವರ ದೇವಸ್ಥಾನಗಳು ನಾಯಕ ಶೈಲಿಗಳ ಉದಾಹರಣೆಗಳು. ವಿಜಯನಗರ ಶೈಲಿಯ ಕಂಬಗಳು ಯಾಳಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಗಂಡಬೇರುಂಡ, ಕರ್ನಾಟಕದ ಪೌರಾಣಿಕ ಎರಡು ತಲೆಯ ಹಕ್ಕಿಯನ್ನು ಚಿತ್ರಿಸುವ ಒಂದು ಶಿಲ್ಪವನ್ನು  ಕೆಳದಿಯಲ್ಲಿ ನೋಡಬಹುದು.
ಖಾಜಿ ಮೊಹಮ್ಮದ್ ನನ್ನು ಭಟ್ಕಳದಲ್ಲಿ ನೆಲೆಸುವಂತೆ ಕೆಳದಿಯ ನಾಯಕರು ಆಹ್ವಾನಿಸಿದರು. ತೆಂಗಿನಗುಂಡಿ ಗ್ರಾಮದ ಆದಾಯವನ್ನು ಕಾಜಿ ಮಹಮ್ಮದ್ ಗೆ ಕೊಡುಗೆಯಾಗಿ ನೀಡಲಾಯಿತು.ಅನೇಕ ನವಾಯತ ಮುಸ್ಲಿಮರನ್ನು ಆಡಳಿತಾತ್ಮಕ ಸ್ಥಾನಗಳಲ್ಲಿ ನೇಮಕ ಮಾಡಲಾಯಿತು. ಈ ಕುಟುಂಬದ ಹಲವಾರು ನವಾಯತರು ಈಗಲು ಇಕ್ಕೇರಿ ಎಂಬ ಉಪನಾಮವನ್ನು ಬಳಿಸುತ್ತಿದ್ದಾರೆ ಮತ್ತು ಭಟ್ಕಳದ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೆಲೆಸಿದ್ದಾರೆ. ಭಟ್ಕಳದ ಜಾಮಿಯಾ ಮಸೀದಿ ಮೇಲಿರುವ ಚಿನ್ನದ ಕಳಶವು (ಚಿನ್ನದ ಪಳ್ಳಿ) ಕೆಳದಿಯ ರಾಜರ ಕೊಡುಗೆಯಾಗಿದೆ.


ಹೊಯ್ಸಳರು

ಹೊಯ್ಸಳರುಹೊಯ್ಸಳರು (೧೦೦೬ – ೧೩೪೬): ದಂತಕಥೆಯ ಪ್ರಕಾರ ಜೈನ ಗುರು ಸುದಾತ್ತನು ಸೊಸೆವೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ “ಹೊಯ್ ಸಳ” ಎಂದು ಆಜ್ಞಾಪಿಸಿದನು. ಇದೆ ಹೊಯ್ಸಳ ಶಬ್ಧದ ಮೂಲ ಎನ್ನುತ್ತಾರೆ.
ಇತಿಹಾಸಕಾರರು ಈ ರಾಜವಂಶದ ಸ್ಥಾಪಕರನ್ನು ಮಲೆನಾಡ ಮೂಲದವರೆಂದು ಮಾಹಿತಿ ನೀಡಿರುತ್ತಾರೆ (ಹಲವಾರು ಶಾಸನಗಳಲ್ಲಿ ಇವರನ್ನು ಮಲೆಪರೊಲ್ಗಂಡ ಎಂದು ಸಂಬೋದಿಸಿದ್ದಾರೆ). ವಿಷ್ಣುವರ್ಧನ ಅವರ ವಿಸ್ತೃತ ಸೇನಾ ವಿಜಯದ ಮೂಲಕ ಹೊಯ್ಸಳರು ಸ್ವತಂತ್ರ ರಾಜ್ಯವಾಗಿ ಹೊಮ್ಮಿದರು. ಚೋಳರಿಂದ ಗಂಗಾವತಿಯನ್ನು ಜಯಿಸಿ ರಾಜಧಾನಿಯನ್ನು ಬೇಲೂರಿನಿಂದ ಹಳೆಬೀಡಿಗೆ ಸ್ಥಳಾಂತರಿಸಿದರು. ಸ್ವತಂತ್ರ ಸಾಮ್ರಾಜ್ಯವನ್ನು  ರಚಿಸುವ ವಿಷ್ಣುವರ್ಧನನ  ಮಹತ್ವಾಕಾಂಕ್ಷೆಯನ್ನು ಅವರ  ಮೊಮ್ಮಗ  ವೀರ ಬಲ್ಲಾಳ- ೨, ೧೧೮೭ – ೧೧೯೩ ರಲ್ಲಿ ಅಧೀನತೆಯಿಂದ ಬಿಡುಗಡಿಸುವುದರ ಮೂಲಕ ಈಡೇರಿಸಿದನು. ವೀರ ಬಲ್ಲಾಳ- ೨, ಇವನು ಚೋಳ ಸಾಮ್ರಾಜ್ಯವನ್ನು ಆಕ್ರಮಿಸಿ ಆಕ್ರಮಣಕಾರಿ ಪಾಂಡ್ಯರನ್ನು  ಸೋಲಿಸಿ ಚೋಳರಾಜ್ಯಪ್ರತಿಷ್ಠಾಚಾರ್ಯ, ದಕ್ಷಿಣ ಚಕ್ರವರ್ತಿ ಮತ್ತು  ಹೊಯ್ಸಳ ಚಕ್ರವರ್ತಿ ಎಂಬ ಬಿರುದುಗಳನ್ನು ಗಳಿಸಿದನು. ದಂತಕಥೆಯ ಪ್ರಕಾರ ಬೆಂಗಳೂರನ್ನು ವೀರ ಬಲ್ಲಾಳ- ೨ ಸ್ಥಾಪಿಸಿದನು.
ದಾಖಲೆಗಳು ಹಲವಾರು ಉನ್ನತ ಸ್ಥಾನಗಳು /ಅಧಿಕಾರಿಗಳು ರಾಜನಿಗೆ ನೇರವಾಗಿ ವರದಿ ಮಾಡುವುದನ್ನು ತಿಳಿಸಿಕೊಡುತ್ತವೆ. ಹಿರಿಯ ಮಂತ್ರಿಗಳನ್ನು ಮಹಾಪ್ರಧಾನವೆಂದು, ವಿದೇಶಾಂಗ ವ್ಯವಹಾರಕ್ಕೆ ಸಂಧಿವಿಗ್ರಹಿಯೆಂದು ಮತ್ತು ಮುಖ್ಯ ಖಜಾಂಚಿಯನ್ನು ಮಹಾಭಂಡಾರಿ / ಹಿರಣ್ಯಭಂಡಾರಿಯೆಂದು ಕರೆಯಲಾಗುತ್ತಿತ್ತು. ಸೇನೆಗಳ ಉಸ್ತುವಾರಿಯನ್ನು ದಂಡನಾಯಕ ಮತ್ತು ಹೊಯ್ಸಳ ನ್ಯಾಯಾಲಯದ ಉಸ್ತುವಾರಿಯನ್ನು ಧರ್ಮಾಧಿಕಾರಿ ಹೊತ್ತಿದ್ದರು. ಸಾಮ್ರಾಜ್ಯವನ್ನು ನಾಡು, ವಿಷಯ, ಕಂಪನ, ಮತ್ತು ದೇಶಗಳಾಗಿ ವಿಭಜಿಸಲಾಗಿದ್ದು ಪ್ರತಿಯೊಂದು ಪ್ರಾಂತ್ಯದಲ್ಲಿ ಒಂದು ಸ್ಥಳೀಯ ಆಡಳಿತವಿದ್ದು ಅದರಲ್ಲಿನ ಮಹಾಪ್ರಧಾನ ಮತ್ತು ಭಂಡಾರಿಯರು ದಂಡನಾಯಕನಿಗೆ ವರದಿ ಸಲ್ಲಿಸುತ್ತಿದರು.
ಉತ್ತಮ ತರಬೇತಿ ಬಲ ಹೊಂದಿದ್ದ ಗಣ್ಯ ಅಂಗರಕ್ಷಕ ದಳ (ಗರುಡ) ರಾಜವಂಶ ಮತ್ತು ಅವರ ಕುಟುಂಬವನ್ನು ರಕ್ಷಿಸುತ್ತಿದ್ದರು. ಗರುಡ ಕಂಬಗಳು (ವೀರಕಲ್ಲುಗಳು) ಇವರ ನೆನಪಿನಲ್ಲಿ ಸ್ಥಾಪಿಸಲಾಗಿದೆ. ಕುವರ ಲಕ್ಷ್ಮ, ಮಂತ್ರಿ ಮತ್ತು ವೀರ ಬಲ್ಲಾಳ-೨  ಅವರ ಅಂಗರಕ್ಷಕನ ನೆನಪಿನಲ್ಲಿ ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದಲ್ಲಿ ಒಂದು ಗರುಡ ಕಂಬವನ್ನು ಸ್ಥಾಪಿಸಲಾಗಿದೆ.
ಹೊಯ್ಸಳರ ಆಳ್ವಿಕೆಯ ಸಮಯದಲ್ಲಿ ಮೂರು ಪ್ರಮುಖ ಧಾರ್ಮಿಕ ಬೆಳವಣಿಗೆಗಳು ( ಬಸವ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯ  ರಿಂದ) ನಡೆಯಿತು. ಮಧ್ವಾಚಾರ್ಯರ ಆದಿ ಶಂಕರರ ಬೋಧನೆಗಳನ್ನು ಟೀಕಿಸಿ ಜಗತ್ತು ನಿಜ (ಭ್ರಮೆ ಅಲ್ಲವೆಂದು) ಎಂದು ವಾದಿಸಿದರು. ಅವರ ತತ್ವಜ್ಞಾನ ಜನಪ್ರಿಯತೆಯನ್ನು ಗಳಿಸಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ವೈಷ್ಣವರ ಮುಖ್ಯಸ್ತ ರಾಮಾನುಜುಚಾರ್ಯರು ಶ್ರೀಭಾಷ್ಯದಲ್ಲಿ (ಅದ್ವೈತ ವೇದಾಂತ ಮೇಲೆ ವಿಮರ್ಶೆ) ಭಕ್ತಿ ಮಾರ್ಗವನ್ನು ಭೋದಿಸಿದರು.  ರಾಜ ವಿಷ್ಣುವರ್ಧನ ಜೈನ ಮತದಿಂದ ವೈಷ್ಣವ ಮತಕ್ಕೆ ಮತಾಂತರಗೊಂಡ ನಂತರ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದನು. ಮಧ್ವಾಚಾರ್ಯರ ನಂತರದವರಾದ ಜಯತೀರ್ಥ,ವ್ಯಾಸತೀರ್ಥ, ಶ್ರೀಪಾದರಾಜ, ವಾದಿರಾಜತೀರ್ಥ, ದಾಸರುಗಳಾದ ವಿಜಯದಾಸ, ಗೋಪಾಲದಾಸರು ಇವರ ಬೋಧನೆಗಳನ್ನು ಹಲವಾರು ಕಡೆ ಹರಡಿದರು. ಗುಜರಾತಿನ ವಲ್ಲಭ ಆಚಾರ್ಯ ಮತ್ತು ಬಂಗಾಳಿನ ಚೈತನ್ಯ ಮಹಾಪ್ರಭುಗಳು ಇವರಿಂದ ಪ್ರಭಾವಿತಗೊಂಡರು.
ಹೊಯ್ಸಳರು ವಿದ್ವಾಂಸರಾದ ಜನ್ನ, ರುದ್ರಭಟ್ಟ, ಹರಿಹರ,ರಾಘವಾಂಕ ರನ್ನು (ಇವರುಗಳ ಕೃತಿಗಳು ಕನ್ನಡದ ಮೇರುಕೃತಿಗಳೆಂದ ಹೆಸರುವಾಸಿಯಾಗಿವೆ) ಪೋಷಿಸಿದರು. ಹರಿಹರ (ಹರಿಸ್ವರ) ಹಳೆಯ ಜೈನ ಚಂಪು ಶೈಲಿಯಲ್ಲಿ ಗಿರಿಜಾಕಲ್ಯಾಣ (ಶಿವ ಮತ್ತು ಪಾರ್ವತಿಯ ಮದುವೆಯನ್ನು ಹತ್ತು ವಿಭಾಗಗಳಲ್ಲಿ ವರ್ಣಿಸಿದ್ದಾರೆ) ರಚಿಸಿದರು.  ಹರಿಶ್ಚಂದ್ರ ಕಾವ್ಯ ಎಂಬ ಕನ್ನಡ ಕೃತಿಯ ಮೂಲಕ ರಾಘವಾಂಕ ಮೊದಲ ಬಾರಿಗೆ ಷಟ್ಪದಿಯನ್ನು  ಪರಿಚಯಿಸಿದರು
ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕರ್ನಾಟ ದ್ರಾವಿಡ ಶೈಲಿಯೆಂದು ಕರೆಯಲಾಗಿದ್ದು ಇದು ಸ್ವತಂತ್ರ ವಾಸ್ತುಶಿಲ್ಪದ ಸಂಪ್ರದಾಯವಾಗಿದ್ದು ಅನೇಕ ಅನನ್ಯ ಲಕ್ಷಣಗಳನ್ನು ಹೊಂದಿದೆ. ಬೇಲೂರಿನ ಚೆನ್ನಕೇಶವ ದೇವಸ್ಥಾನ, ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ, ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ, ಅರಸಿಕೆರೆಯ ದೇವಸ್ಥಾನಗಳು, ಅಮೃತಪುರ, ಬೆಳವಾಡಿ, ನುಗ್ಗೆಹಳ್ಳಿ, ಹೊಸಹೊಳಲು, ಅರಳಗುಪ್ಪೆ, ಕೊರ್ವಂಗಳ, ಇತ್ಯಾದಿಗಳು ಇವರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ. ಬೇಲೂರು ಹಳೇಬೀಡು  ಶಿಲ್ಪಕಲೆಗಳ ಸೌಂದರ್ಯಕ್ಕೆ ಹೆಸರುವಾಸಿಯಾದರೆ, ಹೊಯ್ಸಳ ಕಲೆಯ ಸಂಪೂರ್ಣ ಅಭಿವ್ಯಕ್ತಿಯನ್ನು ಇತರ ಸಣ್ಣ ದೇವಸ್ಥಾನಗಳಲ್ಲಿ ಕಾಣಬಹುದು. ಹಳೇಬೀಡು ದೇವಾಲಯವು  ಹಿಂದೂ ವಾಸ್ತುಶಿಲ್ಪದ ಮಹೋನ್ನತ ಉದಾಹರಣೆಯಾಗಿದ್ದು ಭಾರತೀಯ ವಾಸ್ತುಶಿಲ್ಪಕ್ಕೆ  ಒಂದು ಪ್ರಮುಖ ಮೈಲಿಗಲ್ಲಾಗಿದೆ. ಬೇಲೂರು ಮತ್ತು ಹಳೇಬೀಡಿನ ದೇವಸ್ಥಾನಗಳು ಪ್ರಸ್ತಾಪಿತ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿವೆ. ಆಗಿನ ಕಾಲದಲ್ಲಿ ಬೇಲೂರಿನ  ದೇವಾಲಯದ ಸೊಬಗನ್ನು ನೋಡಿದ ಜನರು ಇವು ಸ್ವರ್ಗದಿಂದ ಭೂಮಿಗೆ ಬಂದಿಳಿದಿವೆ ಮತ್ತೆ ಹಾರಿ ಹೋಗಬಹುದೇನೋ ಎಂದು ಮಾತನಾಡುತಿದ್ದರು.
ಇತಿಹಾಸಕಾರ ಶೆಲ್ಡನ್ ಪೊಲ್ಲಾಕ್ ಪ್ರಕಾರ ಹೊಯ್ಸಳರ ಆಳ್ವಿಕೆಯಲ್ಲಿ ಸಂಸ್ಕೃತ ಸಂಪೂರ್ಣವಾಗಿ  ಸ್ಥಳಾಂತರಗೊಂಡು ಕನ್ನಡ ಆಸ್ಥಾನದ ಭಾಷೆಯಾಗಿ ಪ್ರಾಬಲ್ಯ ಪಡೆದುಕೊಂಡಿತು. ಶಾಸನಗಳು ಹೆಚ್ಚಾಗಿ ಕಲ್ಲು (ಶಿಲಾಶಾಸನ) ಮತ್ತು ತಾಮ್ರದ ಫಲಕಗಳಾಗಿದ್ದು (ತಾಮ್ರಶಾಸನ) ಇವುಗಳಲ್ಲಿ ಹೆಚ್ಚಾಗಿ ಕನ್ನಡವನ್ನು ಉಪಯೋಗಿಸಲಾಗಿದ್ದು ಕೆಲವು ಸಂಸ್ಕೃತದಲ್ಲಿ ಮತ್ತು ಕೆಲವು ದ್ವಿಭಾಷೆಗಳಲ್ಲಿ ಇವೆ.
ಚಾಲುಕ್ಯರು
ಕಲ್ಯಾಣಿ ಚಾಲುಕ್ಯರು ಕ್ರಿ.ಶ 973  ರಲ್ಲಿ , ತೈಲಪ ೨, ರಾಷ್ಟ್ರಕೂಟ ರಾಜವಂಶದ ಸಾಮಂತ (ಬಿಜಾಪುರದಿಂದ), ತನ್ನ ಅಧಿಪತಿಗಳ ಸೋಲಿಸಿ ಮಾನ್ಯಖೆಟವನ್ನು ತನ್ನ ರಾಜಧಾನಿಯಾಗಿಸಿದನು. ಸೋಮೇಶ್ವರ ೧ ರ ಆಳ್ವಿಕೆಯಲ್ಲಿ ಬೆಳೆದ ಈ ರಾಜವಂಶ ತನ್ನ ರಾಜಧಾನಿಯನ್ನು ಕಲ್ಯಾಣಿಗೆ ಸ್ಥಳಾಂತರಿಸಿತು. ಉತ್ತರದ ನರ್ಮದ ದಿಂದ ದಕ್ಷಿಣದ ಕಾವೇರಿ ತನಕ ಇವರ ರಾಜ್ಯ ವ್ಯಾಪಿಸಿತು . ವಿಕ್ರಮಾದಿತ್ಯ-೬  ಇವನ ಐವತ್ತು ವರುಷದ ಆಳ್ವಿಕೆ ಕರ್ನಾಟಕದ ಇತಿಹಾಸದಲ್ಲಿ ಒಂದು ಪ್ರಮುಖ ಕಾಲಮಾನವಾಗಿದ್ದು ಇತಿಹಾಸತಜ್ಞ್ಯರು ಇದನ್ನು “ಚಾಲುಕ್ಯ ವಿಕ್ರಮ ಯುಗ” ವೆಂದು ಕರೆಯುತ್ತಾರೆ. ಉತ್ತರ ಮತ್ತು ದಕ್ಷಿಣದಲ್ಲಿ ತನ್ನ ಪ್ರಬಲ ಸಾಮಂತರು ನಿಯಂತ್ರಿಸಿದ್ದಲ್ಲದೆ ಚೋಳರನ್ನು 1093 (ವೆಂಗಿ ಯುದ್ದದಲ್ಲಿ) ಮತ್ತು 1118 ಸೋಲಿಸಿದನು. ಭರತ ಖಂಡ ಕಂಡ  ಸೋಲನ್ನೇ ಅರಿಯದ ಏಕಮೇವ  ರಾಜ ಎಂದರೆ  ವಿಕ್ರಮಾದಿತ್ಯ, ಕೇವಲ ಪರಾಕ್ರಮಿಯಲ್ಲದೆ, ಹೃದಯವಂತನು, ಪ್ರಜೆಗಳಿಗೆ ಸುಲಭವಾಗಿ ಸಿಗುವವನು, ಅಧಿಕಾರಿಗಳನ್ನು ಅಂಕೆಯಲ್ಲಿ ಇಟ್ಟವನು ಆಗಿದ್ದನು. ಎಲ್ಲ ಧರ್ಮವನ್ನು ಸಮಾನ ಎಂದು ಹೇಳಿದನು. ಮಹಿಳೆಯರಿಗೆ ಗೌರವದ ಸ್ಥಾನಮಾನ ಮತ್ತು ಕಲೆಗೆ ಆಶ್ರಯ ನೀಡಿದ್ದನು.
ಉತ್ಖನನ ಶಾಸನಗಳಲ್ಲಿ ಮಹಾಪ್ರಧಾನ, ಸಂಧಿವಿಗ್ರಾಹಿಕ ಮತ್ತು ಧರ್ಮಾಧಿಕಾರಿ ಪದಗಳನ್ನು ಉಪಯೋಗಿಸಲಾಗಿದೆ. ಸಚಿವ ಸ್ಥಾನಗಳಲ್ಲಿ ತಡೆಯದಂಡನಾಯಕ ಮತ್ತು ದಂಡನಾಯಕ ಸ್ಥಾನಗಳಿದ್ದು ಇವರುಗಳು ಸೇನೆ ದಂಡನಾಯಕತ್ವ ಮತ್ತು ಆಡಳಿತಾತ್ಮಕ ಕೌಶಲ್ಯಗಳಲ್ಲಿ ನಿಪುಣರಾಗಿದ್ದರು ಎಂದು ತಿಳಿದುಬರುತ್ತದೆ. ಸಾಮ್ರಾಜ್ಯವು ಬನವಾಸಿ, ನೋಲಂಬವಾಡಿ, ಗಂಗವಾಡಿ  ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ದೊಡ್ಡ ಪ್ರಾಂತ್ಯಗಳು ಮಂಡಲಗಳಾಗಿ, ಮಂಡಲ ನಾಡಾಗಿ, ನಾಡು ಕಂಪನಗಳಾಗಿ (ಹಳ್ಳಿಗಳ ಗುಂಪು) ಮತ್ತು ಕೊನೆಯದಾಗಿ ಬಡ (ಹಳ್ಳಿ) ಎಂದು ವಿಭಜಿಸಲಾಗಿತ್ತು.
ಬಸವಣ್ಣ ಮತ್ತು ಇತರ ವೀರಶೈವರು ಜಾತಿ ವ್ಯವಸ್ಥೆಯಿಲ್ಲದ ನಂಬಿಕೆಯ ಧರ್ಮೋಪದೇಶ ಮಾಡಿದರು. ಬಸವಣ್ಣ ತನ್ನ ವಚನಗಳಲ್ಲಿ, ಜನಸಾಮಾನ್ಯರಿಗೆ ಸರಳ ಕನ್ನಡದಲ್ಲಿ ಕಾಯಕವೇ ಕೈಲಾಸ ಎಂದು ಭೋದಿಸಿದರು. ಲಿಂಗಾಯತರೆಂದು ಕರೆಸಿಕೊಳ್ಳುವ ವೀರಶೈವರು ಸಮಾಜದ ಹಲವು ನಿಯಮಗಳನ್ನು ( ಪುನರ್ಜನ್ಮ) ಪ್ರಶ್ನಿಸಿದ್ದಲ್ಲದೆ ವಿಧವೆಯರು ಮತ್ತು ಮದುವೆಯಾಗದ ಹಿರಿಯ ಹೆಂಗಸರ ಮದುವೆಗಳನ್ನು ಪ್ರೊತ್ಸಾಹಿಸಿದರು. ಅಕ್ಕ ಮಹಾದೇವಿ, ಅಲ್ಲಮ ಪ್ರಭು ಮತ್ತು ಬಸವಣ್ಣ ಅನುಯಾಯಿಗಳಾದ ಚೆನ್ನಬಸವ, ಪ್ರಭುದೇವ, ಸಿದ್ದರಾಮ, ಮತ್ತು ಕೊಂಡ ಗುಲಿ ಕೇಶಿರಾಜರು ನೂರಾರು ವಚನಗಳನ್ನು ಶಿವನ ಆರಾಧನೆಯಲ್ಲಿ ರಚಿಸಿದ್ದಾರೆ.
ಕನ್ನಡ ವಿದ್ವಾಂಸರ ಪೈಕಿ ಅತ್ಯಂತ ಗಮನಾರ್ಹರಾದವರು ರನ್ನ, ಗಣಿತಜ್ಞ್ಯ ನಾಗವರ್ಮ-೨, ಮಂತ್ರಿ ದುರ್ಗಸಿಂಹ ವೀರಶೈವ ಸಂತ ಬಸವಣ್ಣನವರು. ಕನ್ನಡ ಸಾಹಿತ್ಯದ ಮೂರು ರತ್ನಗಳಲ್ಲಿ ಒಬ್ಬರಾದ ರನ್ನ ರನ್ನು ರಾಜ ತೈಲಪ-೨ ಮತ್ತು ಸತ್ಯಾಶ್ರಯ ರು ಆಶ್ರಯಿಸಿದರು. ಐದು ಪ್ರಮುಖ ಕೃತಿಗಳನ್ನು ರಚಿಸಿದ ಇವರಿಗೆ ರಾಜ ತೈಲಪ-೨  “ಕವಿ ಚಕ್ರವರ್ತಿ” ಬಿರುದನ್ನು ನೀಡಿ ಗೌರವಿಸಿದನು. ಚಂಪು ಶೈಲಿಯಲ್ಲಿ ರಚಿಸಿದ ರನ್ನರ ಸಾಹಸಭೀಮ ವಿಜಯಂ ( ಅಥವ ಗದಾಯುದ್ದ) ಕೃತಿಯಲ್ಲಿ  ತನ್ನನ್ನು ಆಶ್ರಯಿಸಿದ ರಾಜ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸುತ್ತ ೧೮ ದಿವಸ ನಡೆದ ಮಹಾಭಾರತದ ಯುದ್ದದಲ್ಲಿ ಭೀಮ-ದುರ್ಯೋಧನರ ಗದಾಯುದ್ದವನ್ನು ವರ್ಣಿಸಿದ್ದಾರೆ.
ಕಾಶ್ಮೀರಿ ಪಂಡಿತ ಬಿಲ್ಹಣ ಬರೆದ ವಿಕ್ರಮಾಂಕದೇವ ಚರಿತೆ, (೧೮ ವಿಭಾಗಗಳ ಮಹಾಕಾವ್ಯ), ತನನ್ನು ಪೋಷಿಸಿದ ರಾಜ ವಿಕ್ರಮಾದಿತ್ಯ-೬  ರ ಜೀವನ ಮತ್ತು ಸಾಧನೆಗಳನ್ನು ಹಾಡಿ ಹೊಗಳುತ್ತದೆ. ಭಾರತದ ಪ್ರಖ್ಯಾತ ಗಣಿತಶಾಸ್ತ್ರಜ್ಞ ಭಾಸ್ಕರ-೨ ಈ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಬಿಜ್ಜಡ ಬಿಡ (ಈಗಿನ ಬಿಜಾಪುರ) ದವರಾದ ಇವರು ತಮ್ಮ ಪ್ರಸಿದ್ದ ಕೃತಿ ಸಿದ್ಧಾಂತ  ಶಿರೋಮಣಿ ಯಲ್ಲಿ ಲೀಲಾವತಿ. ಬೀಜಗಣಿತ, ಗೋಳಾಧ್ಯಾಯ, ಗ್ರಹಗಣಿತದ ಬಗ್ಗೆ ಬರೆದಿದ್ದಾರೆ. ಸೋಮೇಶ್ವರ-೩ ರವರ ಮಾನಸೋಲ್ಲಾಸ ಅಥವಾ ಅಭಿಲಾಶಿತರ್ತ ಚಿಂತಾಮಣಿ  ಎಂಬ ಸಂಸ್ಕೃತ ಕೃತಿಯಲ್ಲಿ ಸಮಾಜದ ಎಲ್ಲಾ ವಿಭಾಗಗಳ ಕುರಿತು (ಔಷಧ, ಮಂತ್ರಜಾಲ, ಪಶು ವಿಜ್ಞಾನ, ಅಮೂಲ್ಯ ಕಲ್ಲುಗಳು ಮತ್ತು ಮುತ್ತುಗಳ ಮೌಲ್ಯಮಾಪನ, ಕೋಟೆ ಕಟ್ಟುವಿಕೆ  ಚಿತ್ರಕಲೆ, ಸಂಗೀತ, ಆಟಗಳು) ಬರೆದಿರುವ ಒಂದು ವಿಶ್ವಕೋಶ.ಕಲ್ಯಾಣಿ ಚಾಲುಕ್ಯರ ಕಲೆಯನ್ನು “ಗದಗ್ ಶೈಲಿ” ಎಂದೂ ಕರೆಯಲಾಗಿದೆ (ನರ್ಮದ ಮತ್ತು ಕಾವೇರಿ ನದಿಗಳ ಮಧ್ಯದ ಪ್ರದೇಶದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ). ದೇವಸ್ಥಾನಗಳಲ್ಲದೆ, ಈ ರಾಜವಂಶದ ಕಲೆಯನ್ನು ಪುಷ್ಕರಣಿಗಳಲ್ಲಿ (ಧಾರ್ಮಿಕ ಸ್ನಾನ ಸ್ಥಳ) ಲಕ್ಕುಂಡಿಯಲ್ಲಿ ಈಗಲೂ ನೋಡಬಹುದು. ಚಾಲುಕ್ಯ ವಾಸ್ತುಶಿಲ್ಪದ  ಅತ್ಯುತ್ತಮ ಉದಾಹರಣೆಗಳನ್ನು ಕಾಶಿವಿಶ್ವೇಶರ ದೇವಸ್ಥಾನ (ಲಕ್ಕುಂಡಿ), ದೊಡ್ಡ ಬಸಪ್ಪ ದೇವಸ್ಥಾನ (ದಂಬಾಳ), ಮಲ್ಲಿಕಾರ್ಜುನ ದೇವಸ್ಥಾನ (ಕುರುವಟ್ಟಿ), ಕಲ್ಲೇಶ್ವರ ದೇವಸ್ಥಾನ (ಬಾಗಳಿ) , ಸಿದ್ದೇಶ್ವರ ದೇವಸ್ಥಾನ (ಹಾವೇರಿ), ಅಮೃತೇಶ್ವರ ದೇವಸ್ಥಾನ (ಅಣ್ಣಿಗೇರಿ), ಮಹದೇವ ದೇವಸ್ಥಾನ (ಇಟಗಿ) , ಕೈತಬೇಶ್ವರ ದೇವಸ್ಥಾನ (ಕುಬತುರು) ಮತ್ತು ಕೇದಾರೇಶ್ವರ ದೇವಸ್ಥಾನ (ಬಳ್ಳಿಗಾವಿ) ಗಳಲ್ಲಿ ಕಾಣಬಹುದು.

ರಾಷ್ಟ್ರಕೂಟ

ರಾಷ್ಟ್ರಕೂಟರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ಆಳಿದ ರಾಜವಂಶ. ದಂತಿದುರ್ಗನು ಚಾಲುಕ್ಯರ  ಕೀರ್ತಿವರ್ಮನನ್ನು ಸೋಲಿಸಿ ಗುಲ್ಬರ್ಗ ವನ್ನು ಕೇಂದ್ರವಾಗಿಸಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದನು. ದಂತಿದುರ್ಗನು ತನ್ನ ಮಾವ, ಪಲ್ಲವ ರಾಜ ನಂದಿವರ್ಮನನಿಗೆ ಕಂಚಿಯನ್ನು ಚಾಲುಕ್ಯರಿಂದ ಪುನಃ ಪಡೆಯಲು ಸಹಾಯ ಮಾಡುತ್ತಾ, ಗುರ್ಜರ, ಕಳಿಂಗ,ಕೋಸಲ ಮತ್ತು ಶ್ರೀ ಶೈಲ ರಾಜರುಗಳನ್ನು ಸೊಲಿಸಿದನು. ಧ್ರುವನ  ಮೂರನೇ ಮಗನಾದ ಗೋವಿಂದ -೩ ನ ಸಿಂಹಾಸನಾರೋಹಣ ದೊಂದಿಗೆ ಯಶಸ್ಸಿನ ಒಂದು ಯುಗವೇ ಶುರುವಾಯಿತು. ಆತನ ರಣರಂಗದ ಸಾಧನೆಗಳನ್ನು ಮಹಾಭಾರತದ ಅರ್ಜುನ ಮತ್ತು ಅಲೆಕ್ಸಂಡೆರ್ ಗೆ ಹೊಲಿಸಲಾಗಿದೆ. ಈತನ ಉತ್ತರಾಧಿಕಾರಿಯಾದ ಅಮೋಘ ವರ್ಷ ನೃಪತುಂಗ ಮಾನ್ಯಖೇಟ ಅಥವಾ ಮಳಖೇಡ ವನ್ನು ರಾಜಧಾನಿಯಾಗಿಸಿ ಕನ್ನಡಿಗರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ರಾಜನೆಂದು ಹೇಳಬಹುದು. ಅವರ ಆಳ್ವಿಕೆಯಲ್ಲಿ  ಕಲೆ, ಸಾಹಿತ್ಯ ಮತ್ತು ಧರ್ಮಗಳನ್ನು ಸಮೃದ್ಧಗೊಳಿಸಿದ ಕಾಲವೆಂದು ಪರಿಗಣಿಸಲಾಗಿದೆ. ರಾಷ್ಟ್ರಕೂಟರಲ್ಲೆ ಪ್ರಸಿದ್ಧನೆನಿಸಿದ ಅಮೋಘ ವರ್ಷ ನೃಪತುಂಗ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ವತಃ ನಿಪುಣ ವಿದ್ವಾಂಸನಾಗಿದ್ದನು. ಅವರು ಬರೆದ ಕನ್ನಡದ ಕವಿರಾಜಮಾರ್ಗ ಮತ್ತು ಸಂಸ್ಕೃತದ ಪ್ರಶ್ನೋತ್ತರ ಶತಮಾಲಿಕೆ ಒಂದು ಮೈಲುಗಲ್ಲಾಗಿದ್ದು ಇದನ್ನು ಟಿಬೆಟಿಯನ್ ಭಾಷೆಗೂ ಭಾಷಾಂತರಿಸಲಾಗಿದೆ. ಇವರ ಧರ್ಮ ಸಹಿಷ್ಣುಸತೆ, ಕಲೆ ಮತ್ತು ಸಾಹಿತ್ಯದಲ್ಲಿನ ಒಲವು, ಶಾಂತಿ ಪ್ರಿಯ ಪ್ರವೃತ್ತಿಯನ್ನು ಕಂಡು ಇವರನ್ನು ದಕ್ಷಿಣದ ಅಶೋಕ (ಅಶೋಕ ಚಕ್ರವರ್ತಿ) ಎಂದೂ ಕರೆಯುತ್ತಾರೆ.
ರಾಷ್ಟ್ರಕೂಟರ ಪ್ರಭಾವ ಸಂಪೂರ್ಣ  ಭಾರತದ ಮೇಲಾಗಿತ್ತು. ಸುಲೈಮಾನ್, ಅಲ್ ಮಸೂದಿ  ಮುಂತಾದವರು ಸಮಕಾಲೀನ ಭಾರತದ ಅತಿ ದೊಡ್ಡ ಸಾಮ್ರಾಜ್ಯವೆಂದು ಹೇಳಿದರಲ್ಲದೆ ಸುಲೈಮಾನ್ ಇವರನ್ನು ವಿಶ್ವದ ೪ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ. ಇತಿಹಾಸ ತಜ್ಞ್ಯರು ಈ ಕಾಲವನ್ನು “ಕನ್ನೌಜ್ ಚಕ್ರಾಧಿಪತ್ಯದ ಸಮಯ” ವೆಂದು ಕರೆಯುತ್ತಾರೆ. ಮತ್ತು ರಾಷ್ಟ್ರಕೂಟರು ಉತ್ತರ ಭಾರತವನ್ನು ವಶಪಡಿಸಿಕೊಂಡು ತಮ್ಮನ್ನು ದೊರೆಗಳೆಂದು ರುಜುವಾತುಪಡಿಸಿದ್ದರಿಂದ ಇದನ್ನು “ಕರ್ನಾಟಕ ಚಕ್ರಾಧಿಪತ್ಯದ ಸಮಯ” ವೆಂದೂ ಕರೆಯುತ್ತಾರೆ. ಸಾಮ್ರಾಜ್ಯವನ್ನು ಮಂಡಳ ಮತ್ತು ರಾಷ್ಟ್ರಗಳಾಗಿ ವಿಂಗಡಿಸಲಾಗಿದ್ದು , ರಾಷ್ಟ್ರವನ್ನು ಆಳುವವನನ್ನು ರಾಷ್ಟ್ರಪತಿ (ಚಕ್ರವರ್ತಿ) ಎಂದು ಕರೆಯಲಾಗುತ್ತಿತ್ತು. ಅಮೊಘವರ್ಶನ ಸಾಮ್ರಾಜ್ಯದಲ್ಲಿ ೧೬ ರಾಷ್ಟ್ರಗಳಿದ್ದವು. ರಾಷ್ಟ್ರವು ವಿಷಯಗಳಾಗಿ (ವಿಷಯಪತಿ) ಮತ್ತು ವಿಷಯವು ನಾಡು (ನಾಡುಗೌಡ) ಗಳಾಗಿ ವಿಂಗಡಿಸಲಾಗಿತ್ತು. ವಿಂಗಡನೆಯಲ್ಲಿ ಕೊನೆಯ ಹಂತ ಗ್ರಾಮ (ಗ್ರಾಮಪತಿ) ಆಗಿತ್ತು.
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡವು ಸಾಹಿತ್ಯಕ ಭಾಷೆಯಾಗಿ ಪ್ರಾಮುಖ್ಯತೆ ಪಡೆಯಿತು. ಕವಿರಾಜಮಾರ್ಗ ಇತರ ಕವಿಗಳಿಗೆ ಮಾರ್ಗದರ್ಶಿ ಆಯಿತು. ದೊರೆ ಅಮೋಘವರ್ಷ ನೃಪತುಂಗನ ಕಾಲದ ಕವಿರಾಜಮಾರ್ಗ ಗ್ರಂಥದಲ್ಲಿ ” ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮಲೆಗಳ್ ” ಅರ್ಥಾತ್  ಕುಳಿತು ಅಭ್ಯಾಸ ಮಾಡದ ಜನತೆಯೂ ಕಾವ್ಯ ಪ್ರಯೋಗಗಳಲ್ಲಿ ಪರಿಣತೆಯನ್ನು ಹೊಂದಿದ್ದರು ಎಂದು ಕನ್ನಡಿಗರ ಸಾಹಿತ್ಯಾಸಕ್ತಿಯ ಬಗ್ಗೆ  ವರ್ಣಿಸಿದ್ದಾನೆ. ಆದಿ ಕವಿ ಪಂಪ, ಕನ್ನಡದ ಪ್ರಖ್ಯಾತ ಕವಿ ಎಂದು ಪರಿಗಣಿಸಲಾಗಿದ್ದು, ಚಂಪು ಶೈಲಿಯಲ್ಲಿ ಬರೆದ ಆದಿ ಪುರಾಣ (ಜೈನ ತೀರ್ಥಂಕರ ಋಷಭದೇವನ ಚರಿತ್ರೆ) ದಿಂದ ಪ್ರಖ್ಯಾತಿಯನ್ನು ಪಡೆಡಿದೆ. ಉಭಯ ಚಕ್ರವರ್ತಿ (ಎರಡು ಭಾಷೆಗಳಲ್ಲಿ ಸರ್ವೋಚ್ಚ ಕವಿ) ಎಂದು ಹೆಸರು ಪಡೆದ ಶ್ರೀ ಪೊನ್ನ, ರಾಜ  ಕೃಷ್ಣ -೩ ನ ಆಶ್ರಯದಲ್ಲಿದ್ದಾಗ ಶಾಂತಿಪುರಾಣ ಬರೆದು ಪ್ರಖ್ಯಾತನಾದನು. ಕಲೆ ಮತ್ತು ವಾಸ್ತುಶಿಲ್ಪದಲ್ಲಿ ರಾಷ್ಟ್ರಕೂಟರ ಕೊಡುಗೆಯನ್ನು ಎಲ್ಲೋರ ಮತ್ತು ಎಲಿಫೆಂಟಾ ಬಂಡೆಗಲ್ಲಿನ ಗುಹಾ ದೇವಾಲಯಗಳಲ್ಲಿ ಕಾಣಬಹುದು (ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ) . ಅತ್ಯಂತ ಪ್ರಖ್ಯಾತಿಯನ್ನು ಪಡೆದ ಏಕಶಿಲೆಯ ಕೈಲಾಸನಾಥ ದೇವಾಲಯ (ಎಲ್ಲೋರಾ) ರಾಷ್ಟ್ರಕೂಟರ ಕೊಡುಗೆ. ದೇವಾಲಯದ ಗೋಡೆಗಳಲ್ಲಿ  ಅದ್ಭುತವಾದ ಶಿಲ್ಪಕಲೆಗಳಿದ್ದು (ಶಿವ, ಪಾರ್ವತಿ, ರಾವಣ) ಛಾವಣಿಗಳು ವರ್ಣಚಿತ್ರಗಳು ಹೊಂದಿರುತ್ತವೆ.  ಇತಿಹಾಸ ತಜ್ಞ  ವಿನ್ಸೆಂಟ್ ಸ್ಮಿತ್ ಪ್ರಕಾರ ಏಕಶಿಲೆಯ ಕೈಲಾಸನಾಥ ದೇವಾಲಯ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲು  ಅರ್ಹವಾಗಿದೆ.
ಬಾದಾಮಿ ಚಾಲುಕ್ಯ
ಬಾದಾಮಿ ಚಾಲುಕ್ಯರುಬಾದಾಮಿ ಚಾಲುಕ್ಯರ (ಕ್ರಿ.ಶ ೩೫೦ – ೯೯೯) ಮೂಲ ಪುರುಷ ಜಯಸಿಂಹ. ಇವರ ರಾಜಲಾಂಛನ ವರಾಹ, ರಾಜಧಾನಿ ಬಾದಮಿ. (ಇದರ ಪ್ರಾಚೀನ ಹೆಸರು ವಾತಾಪಿ). ಒಂದನೇ ಪುಲಕೇಶಿಯನ್ನು ಚಾಲುಕ್ಯವಂಶದ ನಿಜವಾದ ಸ್ಥಾಪಕನೆಂದು ಹೇಳಲಾಗಿದೆ. ಈ ಸಾಮ್ರಾಜ್ಯವು ಕಾವೇರಿ ಮತ್ತು ನರ್ಮದಾ ನದಿಗಳ ಮಧ್ಯದ ಜಾಗವನ್ನು ಏಕೀಕೃತಗೊಳಿಸಿ ರಾಜ್ಯಭಾರ ನಡೆಸಿತು. ಇಮ್ಮಡಿ ಪುಲಕೇಶಿ ಈ ಮನೆತನದ ಪ್ರಸಿದ್ಧ  ಅರಸ. ಈತ  ನರ್ಮದಾ ನದಿ ಕಾಳಗದಲ್ಲಿ ಉತ್ತರ ಪಥೇಶ್ವರನೆಂದು ಪ್ರಸಿದ್ಧನಾದ ಹರ್ಷವರ್ಧನನ್ನು ಸೋಲಿಸಿದನು. ಆಸ್ಥಾನ ಕವಿ ರವಿಕೀರ್ತಿ ಐಹೊಳೆಯ ಮೇಗುತಿ ದೇವಾಲಯದ ಗೋಡೆಯ ಮೇಲೆ ಸಂಸ್ಕೃತ ಶಾಸನವನ್ನು ಕೆತ್ತಿಸಿದನು. ೬೪೧ ರಲ್ಲಿ ಹೂಯನತ್ಸಾಂಗ ಪುಲಕೇಶಿಯ ಆಸ್ಥಾನಕ್ಕೆ ಭೇಟಿಕೊಟ್ಟಿದ್ದನು. ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪವನ್ನು ಐಹೊಳೆ, ಪಟ್ಟದಕಲ್ಲು, ಬಾದಾಮಿಯಲ್ಲಿ ಕಾಣಬಹುದು. ಐಹೊಳೆಯನ್ನು ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದು ಪೆರ್ಸಿಬ್ರೌನರು ಕರೆದಿದ್ದಾರೆ. ಇವರ ಸೈನ್ಯವನ್ನು “ಕರ್ನಾಟಕ ಬಲ” ಎಂದು ಕರೆಯುತ್ತಿದ್ದರು.
ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖವಾದ ಮೈಲುಗಲ್ಲಾಗಿದ್ದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವೆಂದು ಇತಿಹಾಸ ತಜ್ಞರು ಪರಿಗಣಿಸಿದ್ದಾರೆ. ಇವರ ಪ್ರಾಬಲ್ಯದಿಂದ ದಕ್ಷಿಣ  ಭಾರತವು ಸಣ್ಣ ರಾಜ್ಯಗಳಿಂದ ದೊಡ್ಡ ಸಾಮ್ರಾಜ್ಯದತ್ತ   ಹೆಜ್ಜೆ ಹಾಕಿತು. ಈ ಸಾಮ್ರಾಜ್ಯದ ಉದಯದೊಂದಿಗೆ ದಕ್ಷ ಆಡಳಿತ,ಸಾಗರೋತ್ತರ ವ್ಯಾಪಾರ ಮತ್ತು ವಾಣಿಜ್ಯ ಹಾಗು  “ಚಾಲುಕ್ಯರ ವಾಸ್ತುಶಿಲ್ಪ” ಎಂಬ ವಾಸ್ತುಶಿಲ್ಪ ಕಲೆಯು ಹುಟ್ಟಿಕೊಂಡಿತು. ಇವರ ಆಳ್ವಿಕೆಯಲ್ಲಿ ಸಂಸ್ಕೃತದೊಂದಿಗೆ ಕನ್ನಡವು ಒಂದು ಪ್ರಮುಖ ಭಾಷೆಯಾಗಿ ಹೊಮ್ಮಿಬಂತು. ದೊರೆತ ಹಲವಾರು ನಾಣ್ಯಗಳಲ್ಲಿ ಕನ್ನಡ ಲಿಪಿಯಿದ್ದು ಕನ್ನಡವು ಈ ಕಾಲದಲ್ಲಿ ವಿಜೃಂಭಿಸಿದ ಸಾಕ್ಷಿಗಳಾಗಿವೆ. ಐಹೊಳೆ ದಾಖಲೆಯ ಪ್ರಕಾರ ಪುಲಕೇಶಿ II ತನ್ನ ಸಾಮ್ರಾಜ್ಯವನ್ನು ೩  ಪ್ರಮುಖ ಪ್ರಾಂತ್ಯಗಳಾಗಿ (ಪ್ರತಿಯೊಂದರಲ್ಲಿ  99,000 ಹಳ್ಳಿಗಳು) ವಿಂಗಡಿಸಿದ್ದನು ಮತ್ತು ಇವು ಈಗಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಕರಾವಳಿ ಕೊಂಕಣ್ ಪ್ರದೇಶಗಳೆಂದು ನಂಬಲಾಗಿದೆ.
ಶಾಸನಗಳಲ್ಲಿ ಕನ್ನಡವನ್ನು  “ನೈಸರ್ಗಿಕ ಭಾಷೆ ” ಎಂದು ಪರಿಗಣಿಸಲಾಗಿದ್ದರೂ ಬಹಳಷ್ಟು ದಾಖಲೆಗಳು ಉಳಿದುಕೊಂಡಿಲ್ಲ. ಕಪ್ಪೆ ಆರಬಟ್ಟರ ದಾಖಲೆಯಲ್ಲಿ  ದೊರೆತ ತ್ರಿಪದಿಗಳು(700) ಕನ್ನಡ ಕಾವ್ಯಮೀಮಾಂಸೆಯಲ್ಲಿ ಮೊದಲಿನದು ಎಂದು ಪರಿಗಣಿಸಲಾಗಿದೆ. ಪಶ್ಚಿಮ ಚಾಲುಕ್ಯರ ಕಾಲದ ಪ್ರಮುಖ ಪಂಡಿತ ವಿಜ್ಞಾನೇಶ್ವರ ಮಿತಾಕ್ಷರ, (ಹಿಂದು ಕಾನೂನಿನ ಪುಸ್ತಕ) ಮತ್ತು ಸೋಮೇಶ್ವರ ೩, ಎಲ್ಲಾ ಕಲೆ ಮತ್ತು ವಿಜ್ಞಾನಗಳ ಸಂಕಲನ, ಮಾನಸೋಲ್ಲಾಸ ಎಂಬ ವಿಶ್ವಕೋಶ ಬರೆದು ಖ್ಯಾತಿಯನ್ನು ಪಡೆದರು. ಪಶ್ಚಿಮ ಮತ್ತು ಪೂರ್ವ ಚಾಲುಕ್ಯರ ಆಳ್ವಿಕೆಯು ಕನ್ನಡ ಮತ್ತು ತೆಲುಗು ಸಾಹಿತ್ಯದ ಪ್ರಮುಖ ಘಟ್ಟವೆಂದು ನಂಬಲಾಗಿದೆ. ೯ ಮತ್ತು ೧೦ ನೆ ಶತಮಾನದ ಹೊತ್ತಿಗೆ ಕನ್ನಡ ಭಾಷೆಯು ಹಲವಾರು ಪ್ರಮುಖ ಬರಹಗಾರರನ್ನು ಕಂಡಿತ್ತು ಮತ್ತು ಕನ್ನಡದ ಮೂರು ರತ್ನಗಳಾದ ಆದಿಕವಿ ಪಂಪ, ಪೊನ್ನ ಮತ್ತು ರನ್ನ ಈ ಅವಧಿಯವರಾಗಿದ್ದರು.
 ಗಂಗರು
ಗಂಗರುಗಂಗರು ಸುಮಾರು ೪ನೇ ಶತಮಾನದಿಂದ ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ ೨೦ ವರುಷ ರಾಜ್ಯವನ್ನು ಆಳಿದನು. ಅವರ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಗಂಗಾವತಿ ಎಂದು ಕರೆಯಲಾಗಿದ್ದು ಈಗಿನ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಹಾಗು ಬೆಂಗಳೂರನ್ನು ಆವರಿಸಿತ್ತು. ಗಂಗರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲ ಪ್ರದೇಶಗಳಿಗೆ ರಾಜ್ಯವನ್ನು ವಿಸ್ತರಿಸಿದ್ದರು.
ಹರಿವರ್ಮನು (ಕ್ರಿ.ಶ 390) ತಲಕಾಡನ್ನು ರಾಜಧಾನಿಯಾಗಿ ಮಾಡಿದನು. ಗಂಗರ ಪ್ರಸಿದ್ದ ಅರಸ ದುರ್ವಿನಿತ (555-605) ಸಂಗೀತ, ನೃತ್ಯ, ಆಯುರ್ವೇದ ಮತ್ತು ಆನೆಗಳ ಪಳಗಿಸುವಿಕೆಯಲ್ಲಿ ಪಾರಂಗತನಾಗಿದ್ದನು. ಬುದ್ಧಿವಂತಿಕೆ ಮತ್ತು ಸಮಾನತೆಗೆ ಹೆಸರುವಾಸಿಯಾದ ಯುಧಿಷ್ಠಿರ ಮತ್ತು ಮನು ಚಕ್ರವರ್ತಿಗಳಿಗೆ ಇವರನ್ನು ಹೋಲಿಸಿ ಕಾವ್ಯಗಳನ್ನು ರಚಿಸಿದ್ದಾರೆ. ಇವರಿಗೆ ಅಹೀತ ಅನೀತ, ಧರ್ಮ ಮಹಾರಾಜಾಧಿರಾಜ, ಅವನೀತಸಾರ ಪ್ರಜಾಲಯ, ಕಮಲೋಧರ ಎಂಬ ಬಿರುದುಗಳಿದ್ದವು. ತಲಕಾಡಿನ ಗಂಗರ ಆಡಳಿತವು ಅರ್ಥಶಾಸ್ತ್ರದ ತತ್ವಗಳಿಂದ ಪ್ರಭಾವಿತವಾಗಿದ್ದು ರಾಜ್ಯವನ್ನು ರಾಷ್ಟ್ರ, ವಿಷಯ (1000 ಹಳ್ಳಿಗಳಿಂದ ಕೂಡಿದ್ದು) ಮತ್ತು ದೇಶ ವಾಗಿ ವಿಂಗಡಿಸಲಾಗಿತ್ತು. ೮ ನೆ ಶತಮಾನದಲ್ಲಿ ಸಂಸ್ಕೃತದ “ವಿಷಯ” ಪದವನ್ನು ಕನ್ನಡದ “ನಾಡು” ಪದಕ್ಕೆ ಬದಲಿಸಲಾಯಿತು.ಶಾಸನಗಳು ಪ್ರಮುಖ ಆಡಳಿತ ಅಂಕಿತಗಳಾದ  ಸರ್ವಾಧಿಕಾರಿ, ಶ್ರೀಭಂಡಾರಿ, ಸಂಧಿವಿರ್ಗ್ರಹಿ, ಮಹಾಪ್ರಧಾನ ಮತ್ತು ದಂಡನಾಯಕ ಬಗೆಗೆ ಬೆಳಕು ಚೆಲ್ಲುತ್ತವೆ.
ತಲಕಾಡಿನ ಗಂಗರು ಅವರ ಕಾಲದ ಎಲ್ಲ ಪ್ರಮುಖ ಧರ್ಮಗಳಿಗೆ (ಜೈನ ಧರ್ಮ, ಹಿಂದೂ ಪಂಥಗಳಾದ ಶೈವ, ವೈದಿಕ ಬ್ರಾಹ್ಮಣ, ಶೈವ) ಪ್ರೋತ್ಸಾಹ ನೀಡಿದರು. ಜೈನ ಧರ್ಮವು ೮ ನೆ ಶತಮಾನದಲ್ಲಿ ರಾಜ ಶಿವಮಾರ-೧ ನ ಆಳ್ವಿಕೆಯಲ್ಲಿ ಬಹಳ ಪ್ರಸಿದ್ದಿ ಗಳಿಸಿದ್ದು ರಾಜನು ಅಸಂಖ್ಯಾತ ಜೈನ ಬಸದಿಗಳನ್ನು ಕಟ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. ಮಹಾರಾಜ ೨ನೇ ಬುಟುಗ ಮತ್ತು ಚಾವುಂಡರಾಯರು ಕಟ್ಟಾ ಜೈನರು ಎಂದೆನ್ನಲು ಅವರು ಕಟ್ಟಿಸಿದ ಗೊಮ್ಮಟೇಶ್ವರ  ಏಕಶಿಲೆಯೇ ಸಾಕ್ಷಿ. ಈ ಸಾಮ್ರಾಜ್ಯದ ಆರಂಭಿಕ ಬರಹಗಾರ ರಾಜ ದುರ್ವಿನಿತ ಎಂದು ಕವಿರಾಜಮಾರ್ಗ (ಕ್ರಿ.ಶ 850) ಹೇಳುತ್ತದೆ.  ಚಾವುಂಡರಾಯರು ಕನ್ನಡದ ಮಹಾ ಕವಿ “ರನ್ನ” ನನ್ನು  ಆರಂಭಿಕ ಸಾಹಿತ್ಯದ ದಿನಗಳಲ್ಲಿ  ಪೋಷಿಸಿದರು. ಗಜಾಷ್ಟಕ (ಆನೆಗಳು ಕುರಿತು ನೂರು ಪದ್ಯಗಳು), ಕನ್ನಡದಲ್ಲಿ ಆನೆ ನಿರ್ವಹಣೆಗಳ ಕುರಿತಾದ ಅಪರೂಪದ ಒಂದು ಪುಸ್ತಕವಾಗಿದ್ದು  (ರಾಜ ಶಿವಮಾರ -೨ ಕ್ರಿ.ಶ 800 ಬರೆದ ಪುಸ್ತಕ ) ಈಗ ಕಳೆದುಹೋಗಿದೆ ಎಂದು ನಂಬಲಾಗಿದೆ.
ಕದಂಬ
ಕದಂಬಕದಂಬ ಸಾಮ್ರಾಜ್ಯವನ್ನು ಕಂಚಿಯ ಪಲ್ಲವರನ್ನು ಸೋಲಿಸುವುದರೊಂದಿಗೆ ಮಯೂರವರ್ಮನು ಕ್ರಿ.ಶ ೩೪೫ ಸ್ಥಾಪಿಸಿದನು. ಬನವಾಸಿ ಇವರ ರಾಜಧಾನಿ. ಕಾಕುಸ್ಥವರ್ಮನ ಆಳ್ವಿಕೆಯಲ್ಲಿ ಕದಂಬರ ಕೀರ್ತಿಯು ಉತ್ತುಂಗಕ್ಕೆ ಏರಿತಲ್ಲದೆ ರಾಜನ ಮಿತ್ರತ್ವ ಬಯಸಿ ಉತ್ತರ ಭಾರತದ ಪ್ರಭಲ ದೊರೆಗಳಾದ ಗುಪ್ತರು ಮದುವೆ ಸಂಬಂಧಳನ್ನು ಬೆಳೆಸಿದ್ದರು. ಕದಂಬ ಕುಲಭೂಷಣ, ಕದಂಬ ಅನರ್ಘ್ಯರತ್ನ, ಧರ್ಮರಾಜ, ಧರ್ಮಗಜರಾಜ ಬಿರುದುಗಳನ್ನು ಗಳಿಸಿದ್ದನು . ಕದಂಬ ಇತಿಹಾಸವನ್ನು ಸಂಸ್ಕೃತ ಮತ್ತು ಕನ್ನಡ ಕೃತಿಗಳಲ್ಲಿ ಕಾಣಬಹುದು. ತಾಳಗುಂದ, ಗುಂಡನುರ್, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ರಾಜಮನೆತನದ ಬಗ್ಗೆ ಬೆಳಕು ಚೆಲ್ಲುತ್ತವೆ.
ಕನ್ನಡವನ್ನು ಆಡಳಿತಾತ್ಮಕ ಭಾಷೆಯಾಗಿ ಉಪಯೋಗಿಸಿದ ಮೊದಲ ರಾಜರು ಕದಂಬರೆನ್ನಲು ದೊರಕಿದ ಹಲವಾರು ನಾಣ್ಯಗಳೇ ಸಾಕ್ಷಿ. ಸತಾರ ಜಿಲ್ಲೆಯಲ್ಲಿ ದೊರಕಿದ ನಾಣ್ಯದಲ್ಲಿ ವೀರ ಮತ್ತು ಸ್ಕಂಧ ಲಿಪಿಗಳಿದ್ದು ಭಗೀರತ ರಾಜನ ಬಂಗಾರದ ನಾಣ್ಯದಲ್ಲಿ ಶ್ರೀ ಮತ್ತು ಭಾಗಿ ಲಿಪಿಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ದೊರಕಿದ ೫ ನೆ ಶತಮಾನದ ತಾಮ್ರದ ನಾಣ್ಯದಲ್ಲಿ ಕನ್ನಡ ಲಿಪಿಯನ್ನು ನೋಡಬಹುದಾಗಿದೆ. ಕಾಕುತ್ಸವರ್ಮನ ಆಳ್ವಿಕೆಯ ಸಮಯದಲ್ಲಿ  ಹಲ್ಮಿಡಿಯಲ್ಲಿ ದೊರೆತ (ಕ್ರಿ.ಶ ೪೫೦) ಕಲ್ಲಿನ ಬರಹವನ್ನು ಕನ್ನಡದ ಮೊಟ್ಟ ಮೊದಲನೆಯ ಶಾಸನವೆಂದು ಪರಿಗಣಿಸಲಾಗಿದೆ.
ಕದಂಬ ಶಿಖರ (ಗೋಪುರಾಕೃತಿಯ ಕಟ್ಟಡದಲ್ಲಿ ಮೆಟ್ಟಿಲುಗಳೊಂದಿಗೆ ಏರುತ್ತ ಕಲಶವನ್ನು ಮೇಲೆ ಹೊಂದಿರುತ್ತದೆ) ಇವರ ವಾಸ್ತು ವೈಶಿಷ್ಟ್ಯ.  ಇಂತಹ ಶಿಖರಗಳನ್ನು ದೊಡ್ದಗದ್ದವಲ್ಲಿ ಹೊಯ್ಸಳ ಮತ್ತು ಹಂಪಿಯ ಮಹಾಕೂಟ ದೇವಸ್ಥಾನಗಳಲ್ಲಿ ಕಾಣಬಹುದು. ಹತ್ತನೇ ಶತಮಾನದಲ್ಲಿ ಕಟ್ಟಿಸಿದ ಶಿವನ ದೇವಸ್ಥಾನ (ಮಧುಕೇಶ್ವರ) ಬನವಾಸಿಯಲ್ಲಿ ಇಂದಿಗೂ ಇದೆ. ಅತ್ಯದ್ಭುತ ಕೆತ್ತನೆಗಳುಳ್ಳ ಕಲ್ಲಿನ ಮಂಚ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಕದಂಬ ಸಾಮ್ರಾಜ್ಯಕ್ಕೆ ಗೌರವವನ್ನು ಸೂಚಿಸುತ್ತ ಕರ್ನಾಟಕ ಸರ್ಕಾರವು ಪ್ರತಿ ವರ್ಷವು  ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಕದಂಬ ಸಾಮ್ರಾಜ್ಯದ ನೆನಪಿನ ಪ್ರಯುಕ್ತ ಕಾರವಾರದಲ್ಲಿ ಭಾರತದ ಅತ್ಯಂತ ಮುಂದುವರೆದ ಸೇನಾ ನೌಕ ತುಕಡಿಯನ್ನು INS Kadamba ವೆಂದು ಹೆಸರಿಸಿ ೩೧ ನೆ ಮೇ ೨೦೦೫ ರಲ್ಲಿ ಅಂದಿನ ಭಾರತದ ರಕ್ಷಣಾ ಮಂತ್ರಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.